ಬೆಂಗಳೂರು: ಪ್ರತಿ ವರ್ಷ ಎಲ್ಲಾ ಇಲಾಖೆಗಳ ಕಾರ್ಯನಿರ್ವಹಣೆಯ ಬಗ್ಗೆ ಶ್ರೇಯಾಂಕ ನೀಡಲು ಮಾನದಂಡಗಳನ್ನು ನಿಗದಿಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಆಡಳಿತ ಸುಧಾರಣೆಯ ಕುರಿತು ಅವರು ಇಂದು ಸಭೆ ನಡೆಸಿದರು. ನಿರ್ಧಾರ ಕೈಗೊಳ್ಳುವ ಹಂತಗಳು ಕಡಿಮೆ ಆಗಿ ವಿಳಂಬವಿಲ್ಲದೆ ಜನರಿಗೆ ಸುಲಭವಾಗಿ ಸೌಲಭ್ಯಗಳು ದೊರಕುವಂತಾಗಬೇಕು. ಜನರ ಅರ್ಜಿಗಳಿಗೆ ಕೆಲವೇ ಗಂಟೆಗಳಲ್ಲಿ ಉತ್ತರಿಸುವಂತಿರಬೇಕು. ಅತ್ಯಂತ ಕೆಳಮಟ್ಟದಲ್ಲಿ ಹಾಗೂ ಮೇಲ್ಮಟ್ಟದಲ್ಲಿ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ಕಂದಾಯ ಇಲಾಖೆಯ ಕೆಲವು ಹೊಣೆಯನ್ನು ಗ್ರಾಮ ಪಂಚಾಯತ್ಗಳಿಗೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.
ಜಂಟಿ ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿಗಳನ್ನು ಸಬಲಗೊಳಿಸಬೇಕು. ಪ್ರಾದೇಶಿಕ ಆಯುಕ್ತರು ಬೃಹತ್ ನೀರಾವರಿ, ಭೂಸ್ವಾಧೀನ ಮುಂತಾದ ವಿಷಯಗಳನ್ನು ನಿರ್ವಹಿಸಬೇಕು. ಕಂದಾಯ ಇಲಾಖೆಯ ಸುಧಾರಣೆಯಾದರೆ ಶೇ.40 ರಷ್ಟು ಸರ್ಕಾರಿ ಕೆಲಸ ಕಡಿಮೆಯಾದಂತಾಗುತ್ತದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.