ಬೆಂಗಳೂರು:ವಿಧಾನಮಂಡಲ ಅಧಿವೇಶನದಲ್ಲಿ ನಿರಂತರ ಐದು ದಿನ ಅಹೋರಾತ್ರಿ ಧರಣಿ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಅಂತಿಮವಾಗಿ ಸ್ಪಷ್ಟ ಗೆಲುವು ಲಭಿಸಿಲ್ಲ.
ಅಧಿವೇಶನದಲ್ಲಿ ಅಹೋರಾತ್ರಿ ಧರಣಿ; ಕಾಂಗ್ರೆಸ್ ಸಾಧಿಸಿದ್ದೇನು? ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರ ಸದನದಲ್ಲಿ ನಡೆಸಿದ ಹೋರಾಟ ಜನಪರ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಜನರಿಗೆ ಅಗತ್ಯವಿರುವ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ನಡೆದ ಹೋರಾಟವಲ್ಲ. ಒಬ್ಬ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಅತ್ಯಂತ ಮಹತ್ವದ ಚರ್ಚಿಗೆ ವೇದಿಕೆಯಾಗಬೇಕಿದ್ದ ವಿಧಾನಮಂಡಲ ಅಧಿವೇಶನವನ್ನು ನಿರರ್ಥಕ ಗೊಳಿಸಿದ್ದಾರೆ ಎಂಬ ಆರೋಪದ ಹಣೆಪಟ್ಟಿ ಹೊರಬೇಕಾಗಿ ಬಂದಿದೆ.
ಕೆ.ಎಸ್. ಈಶ್ವರಪ್ಪ ಕೆಂಪುಕೋಟೆಯ ಮೇಲೆ ಮುಂದೊಂದು ದಿನ ಕೇಸರಿ ದ್ವಜ ಹಾರಿಸುವ ದಿನ ಬಂದರೂ ಬರಬಹುದು. ಆದರೆ, ಇಂದು ತ್ರಿವರ್ಣಧ್ವಜ ರಾಷ್ಟ್ರಧ್ವಜವಾಗಿದೆ ಅದಕ್ಕೆ ಅಪಚಾರ ಎಸಗುವವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು. ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜ ಹಾರಿಸುವ ಹೇಳಿಕೆಯನ್ನು ಕೆಎಸ್ ಈಶ್ವರಪ್ಪ ನೀಡುವ ಮೂಲಕ ರಾಷ್ಟ್ರದ್ರೋಹ ಎಸಗಿದ್ದಾರೆ.
ಇದರಿಂದ ಅವರನ್ನು ಸರ್ಕಾರ ಕೂಡಲೇ ವಜಾಗೊಳಿಸಬೇಕು. ರಾಷ್ಟ್ರದ್ರೋಹದ ಹೇಳಿಕೆ ಹಿನ್ನೆಲೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸದನದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಿತ್ತು. ಐದು ದಿನ ಕಲಾಪ ಇದಕ್ಕೆ ಬಲಿಯಾಗಿದ್ದು, ಅಂತಿಮವಾಗಿ ಸರ್ಕಾರ ಮಾರ್ಚ್ 4 ಕ್ಕೆ ಅಧಿವೇಶನವನ್ನು ಮುಂದೂಡಿದೆ.
ಪ್ರತಿಪಕ್ಷಗಳ ಅಸಹಕಾರ: ಮುಂದೂಡುವ ಸಂದರ್ಭದಲ್ಲಿಯೂ ಪ್ರತಿಪಕ್ಷಗಳ ಅಸಹಕಾರದಿಂದ ಅಧಿವೇಶನ ಮುಂದೂಡುತ್ತಿದೆ ಎಂದು ತಿಳಿಸಿದೆ. ಉಭಯ ಸದನಗಳಲ್ಲಿಯೂ ಸರ್ಕಾರ ಸಚಿವರ ರಾಜೀನಾಮೆ ಪಡೆಯಲು ಖಂಡಿತ ಸಾಧ್ಯವಿಲ್ಲ. ಅವರ ಅರ್ಧ ಹೇಳಿಕೆಯ ಮೇಲಷ್ಟೇ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಪೂರ್ಣ ಹೇಳಿಕೆಯ ಅರಿವು ಅವರಿಗಿಲ್ಲ. ಈಶ್ವರಪ್ಪ ಒಬ್ಬ ಅಪ್ಪಟ ದೇಶಪ್ರೇಮಿ. ಇವರು ಯಾವುದೇ ರೀತಿಯ ರಾಷ್ಟ್ರದ್ರೋಹದ ಹೇಳಿಕೆ ನೀಡಿಲ್ಲ.
ಸದನದ ಕಲಾಪವನ್ನು ಈ ರೀತಿ ಬಲಿ ಕೊಡುವ ಬದಲು ಕಾಂಗ್ರೆಸ್ ಪಕ್ಷ ಸದನದ ಹೊರಗೆ ರಾಷ್ಟ್ರ ಹಾಗೂ ರಾಜ್ಯದ ಯಾವುದೇ ಭಾಗದಲ್ಲಿ ಹೋರಾಟ ನಡೆಸಿದರು ಅದಕ್ಕೆ ಅಭ್ಯಂತರವಿಲ್ಲ. ಅವರ ಜೊತೆ ಎಲ್ಲಾ ವಿಧದ ಚರ್ಚೆಗೂ ನಾವು ಸಿದ್ಧರಿದ್ದೇವೆ. ಸಚಿವರ ರಾಜೀನಾಮೆಗೆ ಆಗ್ರಹಿಸಿ ಅನಗತ್ಯವಾಗಿ ಸದನದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆ, ಹಲವು ಜನಪರ ಸಮಸ್ಯೆಗಳ ಪರಿಹಾರಕ್ಕೆ ನಡೆಸಬೇಕಿರುವ ಚರ್ಚೆ ಮೊಟಕುಗೊಳ್ಳಬಾರದು. ಇದರಿಂದಾಗಿ ಸದನದ ಹೊರಗೆ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಲಿ. ಸದನದ ಒಳಗೆ ಚರ್ಚೆಗೆ ಅವಕಾಶ ಆಗಲಿ ಎಂದು ಒತ್ತಾಯಿಸಿದ್ದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ಸದನಗಳಲ್ಲಿಯೂ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಮಾತನಾಡಿದ್ದು, ವಿಧಾನಮಂಡಲ ಅಧಿವೇಶನದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದ ನಿದರ್ಶನ ಈ ಸಾರಿ ಲಭಿಸಿದೆ.
ಶೂನ್ಯ ಫಲಿತಾಂಶ:ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಶಾಸಕರ ಗದ್ದಲದ ನಡುವೆ ಕೇವಲ ಪ್ರಶ್ನೋತ್ತರ ಅವಧಿ ಮಾತ್ರ ನಡೆದಿದ್ದು ಬೇರೆ ಯಾವುದೇ ಚರ್ಚೆಗಳು ನಡೆದಿಲ್ಲ. ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಧಿವೇಶನ ನಡೆಸುವ ಸಂದರ್ಭ ವ್ಯರ್ಥವಾಗಿದೆ ಎಂಬ ಮಾತು ಕೇಳಿಬರುತ್ತಿದ್ದು, ಈ ಹೋರಾಟದ ಕೊನೆಯಲ್ಲಿ ಸಚಿವರ ರಾಜೀನಾಮೆಯನ್ನು ಪಡೆಯಲಾಗದೆ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.
5 ದಿನದ ಹೋರಾಟದ ಕೊನೆಯಲ್ಲಿ ಲಭಿಸಿದ ಯಶಸ್ಸು ಏನು ಎಂದು ಪ್ರಶ್ನಿಸಿದರೆ ಉತ್ತರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಕಡೆಯ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈಶ್ವರಪ್ಪ ನೀಡಿದ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಈ ಮೂಲಕ ನಮ್ಮ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ ಎಂಬ ಒಂದು ಸಾಲಿನ ಸಾರಾಂಶವನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ.
ಚಳಿಗಾಲದ ಅಧಿವೇಶನದ ಹೋರಾಟವೂ ವ್ಯರ್ಥ: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆ ಹೊರತುಪಡಿಸಿ ಕೆ.ಆರ್. ಪುರದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಬಸವರಾಜು ರಾಜೀನಾಮೆಗೆ ಆಗ್ರಹಿಸಿ ಸದನದ ಎರಡು ದಿನವನ್ನು ವ್ಯರ್ಥ ಮಾಡಿದ್ದ ಅಪವಾದಕ್ಕೆ ಗುರಿಯಾಗಿದ್ದ ಕಾಂಗ್ರೆಸ್, ಇದೀಗ ಇನ್ನೊಂದು ವಿಚಾರದಲ್ಲಿ ಹೋರಾಟ ನಡೆಸಿ ಕಲಾಪದ ಮಹತ್ವದ ಸಮಯ ವ್ಯರ್ಥ ಮಾಡಿದೆ ಎಂಬ ಹಣೆಪಟ್ಟಿ ಹೋರುವ ಸ್ಥಿತಿ ಎದುರಾಗಿದೆ. ಹೇಳಿಕೊಳ್ಳುವ ಯಶಸ್ಸು ಸಹ ಲಭಿಸದ ಹಿನ್ನೆಲೆ ಕಾಂಗ್ರೆಸ್ನ ಪ್ರಯತ್ನ ಮತ್ತೊಮ್ಮೆ ಅರ್ಥವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎರಡು ಸಂದರ್ಭದಲ್ಲಿಯೂ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ನಿಶ್ಚಿತ ಫಲ ಸಿಕ್ಕಿಲ್ಲ. ಕಾಂಗ್ರೆಸ್ ಹೋರಾಟಕ್ಕೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಾಗಲಿ ಇಲ್ಲವೇ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆಗಲಿ ಈ ಮಾತನ್ನು ಒಪ್ಪುತ್ತಿಲ್ಲ.
ಸಂಘಪರಿವಾರದ ಒತ್ತಡ: ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಪ್ರಕಾರ, ನಮ್ಮ ಹೋರಾಟ ಯಶಸ್ಸು ಕಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ತಮ್ಮ ಮಾಧ್ಯಮ ಸಂದರ್ಶನದಲ್ಲಿ ಈಶ್ವರಪ್ಪ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ. ರಾಜ್ಯ ನಾಯಕರು ಸಂಘ ಪರಿವಾರದವರ ಒತ್ತಡಕ್ಕೆ ಮಣಿದು ಈಶ್ವರಪ್ಪ ರಾಜೀನಾಮೆ ಪಡೆಯುತ್ತಿಲ್ಲ. ನಮಗೆ ರಾಷ್ಟ್ರೀಯ ಮಟ್ಟದಲ್ಲಿ ಈಶ್ವರಪ್ಪ ವಿರುದ್ಧ ಹೋರಾಟಕ್ಕೆ ಪ್ರತಿಫಲ ಲಭಿಸಿದೆ. ಅಧಿವೇಶನ ಮುಂದೂಡಿಕೆ ಯಾಗಿರುವ ಹಿನ್ನೆಲೆ ನಮ್ಮ ಹೋರಾಟವನ್ನು ನಾವು ಸದನದಲ್ಲಿ ಕೈಬಿಟ್ಟಿದ್ದು, ಹೊರಗೆ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಸರ್ಕಾರ ಸುಳ್ಳು ಹೇಳಿ, ತನ್ನ ಬೆನ್ನನ್ನು ತಾನೇ ತಟ್ಕೊಂಡು ಓಡಾಡುತ್ತಿದೆ, ಇದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ: ಸಿದ್ದರಾಮಯ್ಯ