ಕರ್ನಾಟಕ

karnataka

ETV Bharat / state

ಹಿರಿಯರು ಪಕ್ಷಕ್ಕೆ ಮಾಡಿರುವ ಸೇವೆ ಮರೆಯಲ್ಲ, ಬಂಡಾಯ ಶೀಘ್ರ ಶಮನ: ಅರುಣ್ ಸಿಂಗ್ - ಹಿರಿಯ ಟಿಕೆಟ್​ ಆಕಾಂಕ್ಷಿಗಳು

ಈ ಬಾರಿ ಯುವಕರಿಗೆ ಅವಕಾಶ ನೀಡಿದ್ದೇವೆ. ಹಿರಿಯರು ಅವರಿಗೆ ಸಾಥ್​ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

BJP state in charge Arun Singh
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

By

Published : Apr 13, 2023, 5:12 PM IST

Updated : Apr 13, 2023, 5:38 PM IST

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗದೆ ಪಕ್ಷದ ಕೆಲವು ಹಿರಿಯ ಟಿಕೆಟ್​ ಆಕಾಂಕ್ಷಿಗಳು ಬೇಸರಗೊಂಡಿದ್ದಾರೆ. ಆದರೆ ಅವರು ಯಾವುದೇ ಕಾರಣಕ್ಕೂ ಬಿಜೆಪಿಯಿಂದ ದೂರ ಹೋಗುವುದು ಸರಿಯಲ್ಲ. ಪಕ್ಷವೂ ಅವರ ಸೇವೆಯನ್ನು ಮರೆಯುವುದಿಲ್ಲ. ಬಂಡಾಯವೆಲ್ಲವೂ ಶೀಘ್ರ ಮುಗಿಯಲಿದೆ. ಈ ಬಾರಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರಲ್ಲಿ ಕೆಲವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನವಿದೆ. ನಾವು ಪರಿಸ್ಥಿತಿಯನ್ನು ಅರ್ಥ ಮಾಡಿಸುತ್ತೇವೆ. ಟಿಕೆಟ್ ಸಿಗಲಿಲ್ಲವೆಂದು ಕೆಲವರ ಮನಸ್ಸಿಗೆ ನೋವಾಗಿದೆ ಎನ್ನುವುದು ನಿಜ. ಬಿಜೆಪಿಯ ವಿಚಾರದಿಂದ ಅವರು ದೂರ ಉಳಿಯಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರು ದೇಶ, ಸಮಾಜ ಸೇವೆ ಮನೋಭಾವದವರು. ಬೇಸರಗೊಂಡವರೆಲ್ಲರ ಜೊತೆ ಮಾತನಾಡುತ್ತೇವೆ. ಇದುವರೆಗೆ ಪಕ್ಷಕ್ಕೆ ಮಾಡಿರುವ ಸೇವೆಯನ್ನು ಪಕ್ಷ ಯಾವತ್ತೂ ಮರೆಯುವುದಿಲ್ಲ ಎಂದರು.

ಜಗದೀಶ್ ಶೆಟ್ಟರ್ ನಮ್ಮ ಹಿರಿಯ ನಾಯಕರು. ಅವರ ವಿಚಾರದಲ್ಲಿ ಕಾರ್ಯಕರ್ತರು ಬೇಸರವಾಗಿಲ್ಲ. ಎಲ್ಲರೂ ಒಟ್ಟಾಗಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡುತ್ತಾರೆ. ಎಲ್ಲರ ಲಕ್ಷ್ಯ ಒಂದೇ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ ಸರ್ಕಾರ ರಚನೆ ಮಾಡಲು, ಬಿಜೆಪಿಯನ್ನು ಗೆಲ್ಲಿಸುವುದೇ ಎಲ್ಲರ ಗುರಿಯಾಗಿದೆ ಎಂದು ಅರುಣ್ ಸಿಂಗ್ ಹೇಳಿದರು.

ಅರವತ್ತಕ್ಕೂ ಹೆಚ್ಚು ಹೊಸ ಮುಖಗಳಿಗೆ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಹೊಸ ಪೀಳಿಗೆಯ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ ಸಾಧ್ಯ. ಇದರಿಂದ ಬಿಜೆಪಿ ಕಾರ್ಯಕರ್ತರು ಸಂತೋಷದಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಿದ್ಧರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಕೆಲಸಕ್ಕೆ ಬಿಜೆಪಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ. ನನಗೆ ಬಿಜೆಪಿ ಪೂರ್ತಿ ಬಹುಮತದಿಂದ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.

ಈಗಾಗಲೇ 189 ಅಭ್ಯರ್ಥಿಗಳ ಮೊದಲ ಪಟ್ಟಿ ಹಾಗು 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಬಿಜೆಪಿಯ ಮೂರನೇ ಪಟ್ಟಿ ಕೂಡ ರಿಲೀಸ್ ಆಗುತ್ತದೆ. ನಮ್ಮ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಆದ ಮೇಲೆ ಕಾಂಗ್ರೆಸ್​ನಲ್ಲಿ ತಳಮಳ ಪ್ರಾರಂಭವಾಗುತ್ತದೆ. ಕಾಂಗ್ರೆಸ್‌ನಲ್ಲಿ ಕಚ್ಚಾಟ ಇದೆ, ಮೂರು ಗುಂಪು ಇದೆ. ಈ ಸಲ ಮತ್ತೆ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಪ್ರಚಂಡ ಬಹುಮತ ನಮಗೆ ಸಿಗುತ್ತದೆ ಎಂದು ಅರುಣ್​ ಸಿಂಗ್​ ಹೇಳಿದ್ದಾರೆ.

ಇದನ್ನೂ ಓದಿ:ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ನೀಡಿಲ್ಲ: ಬಿ ವೈ ವಿಜಯೇಂದ್ರ

Last Updated : Apr 13, 2023, 5:38 PM IST

ABOUT THE AUTHOR

...view details