ಬೆಂಗಳೂರು: ಕಳೆದ ವರ್ಷ ಕೋವಿಡ್-19 ಎರಡನೇ ಅಲೆಯಿಂದ ಜಾರಿಯಾದ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟದಿಂದ ಹೊರಬರಲಾಗದೆ ಅದೆಷ್ಟೋ ಕುಟುಂಬಗಳು ತತ್ತರಿಸಿಹೋಗಿದ್ದವು. ಕೈಯಲ್ಲಿ ದುಡ್ಡಿಲ್ಲದೆ ಕೆಲಸ ಮಾಡುವ ಮಾಲೀಕರ ಮನೆಗಳು ಹಾಗೂ ಅಂಗಡಿಗಳಲ್ಲಿ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗಿದ್ದವು. ಕಳೆದ ವರ್ಷ ರಾಜಧಾನಿ ಬೆಂಗಳೂರಿನಲ್ಲಿ 195 ಸೇವಕ ಕಳ್ಳತನ ಪ್ರಕರಣಗಳು ವರದಿಯಾದರೆ, ಈ ಪೈಕಿ 95 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
2020ರಲ್ಲಿ ದಾಖಲಾದ 195 ಪ್ರಕರಣಗಳ ಪೈಕಿ 65 ಪ್ರಕರಣಗಳು ಬಗೆಹರಿದಿವೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಶೇ.133ರಷ್ಟು ಸರ್ವೆಂಟ್ಸ್ ಥೆಪ್ಟ್ ಕೇಸ್‌ಗಳು ಅಧಿಕವಾಗಿವೆ. ಅದೇ ರೀತಿ ಸಾಮಾನ್ಯ ಕಳ್ಳತನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ.
ಕಳೆದ ವರ್ಷ 1170 ಸಾಮಾನ್ಯ ಕಳ್ಳತನ ಪ್ರಕರಣಗಳು ವರದಿಯಾದರೆ 343 ಕೇಸ್‌ಗಳನ್ನು ಮಾತ್ರ ಪೊಲೀಸರು ಭೇದಿಸಿದ್ದಾರೆ. ಈ ಮೂಲಕ ಪ್ರಕರಣಗಳು ಶೇ.156ರಷ್ಟು ಏರಿಕೆಯಾಗಿವೆ. 2020ರಲ್ಲಿ 749 ಕೇಸ್‌ಗಳ ಪೈಕಿ 242 ಕೇಸ್‌ಗಳನ್ನು ಪೊಲೀಸರು ಬಗೆಹರಿಸಿದ್ದರು.
ಪೊಲೀಸ್ ಆಯುಕ್ತರಿಂದ ವಿವರಣೆ ಲಾಕ್‌ಡೌನ್ ಸಾವಿರಾರು ಸಂಖ್ಯೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮೇಲಿನ ಕುಟುಂಬಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು. ಲಕ್ಷಾಂತರ ಯುವಕ-ಯುವತಿಯರು ಕೆಲಸ ಕಳೆದುಕೊಂಡಿದ್ದರು. ಈ ಪೈಕಿ ಕೆಲವರು ಬದುಕಿನ ಬಂಡಿ ಸಾಗಿಸಲು ವಾಮ ಮಾರ್ಗದ ಮೊರೆ ಹೋಗಿ ಕೆಲಸ ಮಾಡುವ ಸ್ಥಳದಲ್ಲೇ ಮಾಲೀಕರ ಗಮನಕ್ಕೆ ಬಾರದೆ ನಗ-ನಾಣ್ಯ ದೋಚಿದ್ದರು. ಮತ್ತೊಂದೆಡೆ, ಗಂಡ-ಹೆಂಡತಿ ಕೆಲಸಕ್ಕೆ ಹೋಗುವವರ ಹಾಗೂ ಉನ್ನತ ಹುದ್ದೆಯಲ್ಲಿರುವ ಮನೆಗಳಲ್ಲಿ ನಿಯೋಜಿಸಲಾಗಿದ್ದ ಮನೆಕೆಲಸಗಾರರಿಂದಲೇ ಕಳ್ಳತನ ನಡೆದಿತ್ತು.
'ಅನ್ಯ ರಾಜ್ಯ ಅಥವಾ ಬೇರೆ ಬೇರೆ ಜಿಲ್ಲೆಗಳಿಂದ ಬಂದು ನಗರದಲ್ಲಿ ನೆಲೆ ಕಟ್ಟಿಕೊಂಡಿರುವವರು ಸರ್ವೆಂಟ್ ಥೆಫ್ಟ್‌ನಲ್ಲಿ ಭಾಗಿಯಾಗಿ ತಮ್ಮ ತಮ್ಮ ಊರುಗಳಿಗೆ ಪರಾರಿ ಆಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಖದೀಮರನ್ನು ಬಂಧಿಸುವುದು ಕಷ್ಟವಾಗಿತ್ತು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.