ಬೆಂಗಳೂರು : ಕೊರೊನಾ ನಿಯಂತ್ರಣದಲ್ಲಿ ಕಳೆದ ಆರು ತಿಂಗಳಲ್ಲಿ ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕಂಡುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನ ಪರಿಷತ್ನಲ್ಲಿ ಅರ್ಧ ಗಂಟೆ ಚರ್ಚೆ ಮಾಡಿ ಮಾತನಾಡಿದ ಅವರು, ರೋಗ ತಡೆಯಲು ಏನು ಮಾಡಬೇಕಿತ್ತೋ ಅದನ್ನು ಮಾಡಲು ಸಚಿವರ ನಡುವಿನ ಸಂವಹನ ಕೊರತೆ ಕಾರಣವಾಗಿದೆ. ಸಮಯಕ್ಕೆ ಸರಿಯಾಗಿ ಸುರಕ್ಷತಾ ಕ್ರಮ ಕೈಗೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಮಾರಕ ರೋಗ ನಿಯಂತ್ರಣಕ್ಕೆ 4 ಸಾವಿರ ಕೋಟಿ ವ್ಯಯಿಸಿರುವ ಸರ್ಕಾರ ಶೇ.1 ರಷ್ಟು ನಿಯಂತ್ರಿಸಲು ಸಾಧ್ಯವಾಗಿಲ್ಲ. ಖರೀದಿಗೆ ಎಲ್ಲಿ ಕಮೀಷನ್ ಸಿಗಲಿದೆ ಎನ್ನುವುದನ್ನು ಸಚಿವರು ಗಮನಿಸಿದರೇ ಹೊರತು, ಪ್ರಾಮಾಣಿಕ ಪ್ರಯತ್ನ ಆಗಿಲ್ಲ. ಕೇರಳದ ನಿಯಂತ್ರಣ ಮಾದರಿ ಅಳವಡಿಸಿಕೊಳ್ಳಬೇಕಿತ್ತು. ಆರಂಭದಲ್ಲೇ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದರು. ಅವರ ಹಾದಿಯಲ್ಲಿ ಸಾಗಬಹುದಿತ್ತು ಎಂದರು.
ಗೊಂದಲ ನಿರ್ಮಾಣ:ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಸ್ಥಾಪಿಸಿದೆ. ಇದರ ಲೆಕ್ಕ ಕೇಳುವಂತಿಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಯಾವ ಅನುದಾನ ಸಿಕ್ಕಿದೆ ಎಂದು ಕೇಳಿದಾಗ ಆಡಳಿತ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಆಯನೂರು ಮಂಜುನಾಥ್, ರವಿಕುಮಾರ್ ಖಂಡಿಸಿದರು. ರಾಜ್ಯ ಆರೋಗ್ಯ ಇಲಾಖೆ ಬಗ್ಗೆ ಮಾತಾಡಿ, ಪಿಎಂ ಕೇರ್ಸ್ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕರ್ನಾಟಕ ನಾಲ್ಕನೇ ಸ್ಥಾನದಲ್ಲಿ ಇದೆ ಎಂದು ನಾರಾಯಣಸ್ವಾಮಿ ತಿಳಿಸಿದಾಗ ಆಡಳಿತ ಪಕ್ಷ ಸದಸ್ಯರು ಮೊದಲ ಸ್ಥಾನದಲ್ಲಿರುವ ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎಂದು ಕೇಳಿ ಗಲಾಟೆ ಮಾಡಿದರು. ಸರ್ಕಾರಕ್ಕೆ ಉತ್ತರಿಸುವ ಸಾಮರ್ಥ್ಯ ಇಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿ ನಾರಾಯಣಸ್ವಾಮಿ ಮಾತು ಮುಂದುವರಿಸಿದರು.
ಸಲಹೆ ಸ್ವೀಕರಿಸಲಿಲ್ಲ:ರಾಜ್ಯ ಸರ್ಕಾರ ನಮ್ಮ ಸಲಹೆ ಸ್ವೀಕರಿಸಲಿಲ್ಲ. ಬದಲಾಗಿ ನಿಯಂತ್ರಿಸಿದ್ದರೆ ಮೆಚ್ಚುಗೆ ಮಾತನ್ನಾಡಬಹುದಿತ್ತು. ಆದರೆ, ಸ್ಥಿತಿ ಶೋಚನೀಯ ವಾಗಿದೆ. ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಸಲಕರಣೆ ಇತ್ಯಾದಿಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ. 4 ಲಕ್ಷ ಬೆಲೆಯ ವೆಂಟಿಲೇಟರ್ನ್ನು 18,20,000 ರೂ.ಗೆ ಖರೀದಿಸಿದೆ. ಎಷ್ಟು ಪಟ್ಟು ಹಣ ಹೆಚ್ಚಾಗಿದೆ ಅನ್ನುವುದಕ್ಕೆ ಉತ್ತರವಿಲ್ಲ. ಇಲ್ಲಾದ ಅವ್ಯವಹಾರದ ತನಿಖೆ ಆಗಿಲ್ಲ, ಯಾರ ಮೇಲೂ ಕ್ರಮ ಆಗಿಲ್ಲ, ಮೂರು ಪತ್ರ ಬರೆದು ಆರು ತಿಂಗಳಾಯಿತು, ಇನ್ನೂ ಉತ್ತರ ಬಂದಿಲ್ಲ. ಆಂಬುಲೆನ್ಸ್ ಸಿಗುತ್ತಿಲ್ಲ, ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ. ಜನರಿಗೆ ಆಂಬುಲೆನ್ಸ್ ನೀಡದ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು ಎಂದು ನಾರಾಯಣಸ್ವಾಮಿ ಹೇಳಿದ್ದಕ್ಕೆ ಆಡಳಿತ ಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಬಸವರಾಜ ಹೊರಟ್ಟಿ ಹಾಗೂ ಎಸ್.ಆರ್. ಪಾಟೀಲ್ ಮಧ್ಯಪ್ರವೇಶಿಸಿ ಮಾತನಾಡಲು ಅವಕಾಶ ನೀಡಿ, ನಂತರ ಮಾತನಾಡಿ ಎಂದು ಸಲಹೆ ಇತ್ತರು.
ಇಲ್ಲಿ ರಾಜಕೀಯ ಬೇಡ:ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಇದು ಸರ್ಕಾರದ ವೈಫಲ್ಯದಿಂದ ಆದ ಸಮಸ್ಯೆ ಅಲ್ಲ. ಇಡೀ ಜಗತ್ತು ಸಮಸ್ಯೆಗೆ ತುತ್ತಾಗಿದೆ. ಇಲ್ಲಿ ಆಗಿರುವ ಒಳ್ಳೆಯ ಕೆಲಸದ ಬಗ್ಗೆಗೂ ತಿಳಿಸಿ, ಸರ್ಕಾರ ಇಷ್ಟು ಕಷ್ಟದ ಸಮಸ್ಯೆಯಲ್ಲಿ ಮಾಡಿರುವ ಉತ್ತಮ ಕೆಲಸದ ಬಗ್ಗೆ ಮಾತನಾಡಿ. ರೋಗದ ವಿಚಾರದಲ್ಲಿ ರಾಜಕೀಯ ಬೇಡ. ತಮಿಳುನಾಡು ರಾಜ್ಯ ನಮ್ಮಲ್ಲಾದ ರೋಗ ನಿಯಂತ್ರಣವನ್ನು ಮೆಚ್ಚಿದೆ. ಕೆಲ ರಾಜ್ಯದಲ್ಲಿ ಈಗಲೂ ಲಾಲ್ಡೌನ್ ಜಾರಿಯಲ್ಲಿದೆ. ನಮ್ಮಲ್ಲಿ ಕೈಗಾರಿಕೆ ಕಾರ್ಯ ನಿರ್ವಹಿಸುತ್ತಿದೆ. ನಾವು ಸುರಕ್ಷತೆ ಕೈಗೊಂಡರೂ ರೋಗ ಹೆಚ್ಚಾಗುತ್ತಿದೆ. ಸೂಕ್ತ ಸಲಹೆ ಸೂಚನೆ ಕೊಡುವ ಕೆಲಸ ಮಾಡಿ. ಇಲ್ಲಿ ರಾಜಕೀಯ ಬೇಡ ಎಂದು ಸಲಹೆ ನೀಡಿದರು.