ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಹಾಗೂ ನಟಿ ಸಂಜನಾ ಅವರಿಬ್ಬರ ವೈಮನಸ್ಸಿನ ಕಾರಣ ಇಬ್ಬರಿಗೂ ಮಹಿಳಾ ಸಾಂತ್ವನ ಕೊಠಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಮೊದಲು ಬಂಧನವಾದ ನಟಿ ರಾಗಿಣಿ ಜೊತೆಯೇ ಸಂಜನಾ ಗಲ್ರಾನಿಯನ್ನ ಕೂಡ ಒಂದು ರೂಮ್ನಲ್ಲಿ ಐದು ಬೆಡ್ ಇರುವ ವ್ಯವಸ್ಥೆ ಮಾಡಿಕೊಡಲಾಗಿತ್ತು. ಈ ಐದು ಬೆಡ್ನಲ್ಲಿ ಮೂರು ಮಂದಿ ಮಹಿಳಾ ಪೊಲೀಸರು, ಇನ್ನೆರಡು ನಟಿಮಣಿಯರಿಗೆ ಕೊಡಲಾಗಿತ್ತು. ಆದರೆ ಇಬ್ಬರು ತಮಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಿ ಎಂದಿದ್ದಾರೆ. ಹೀಗಾಗಿ ಒಂದು ರೂಮ್ನಲ್ಲಿ ಸಂಜನಾ, ಇನ್ನೊಂದು ರೂಮ್ನಲ್ಲಿ ರಾಗಿಣಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ.
ಸದ್ಯ ರಾಜ್ಯ ಮಹಿಳಾ ನಿಲಯ ಸಾಂತ್ವನ ಕೇಂದ್ರದಲ್ಲಿ ಇಬ್ಬರೂ ನಟಿಮಣಿಯರು ಇದ್ದು, ಇಬ್ಬರಿಗೂ ಸದ್ಯ ಪ್ರತ್ಯೇಕ ರೂಮ್ ಕೊಟ್ಟು ಮಹಿಳಾ ಸಿಬ್ಬಂದಿ ಅವರ ಭದ್ರತೆಯನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ. ಇನ್ನು ಇನ್ಸ್ಪೆಕ್ಟರ್ ಅಂಜುಮಾಲಾ ನೇತೃತ್ವದಲ್ಲಿನ ತಂಡ ಇಂದು ಇಬ್ಬರು ನಟಿಮಣಿಯರ ವಿಚಾರಣೆ ನಡೆಸಲಿದ್ದಾರೆ. ಸದ್ಯ ಸಂಜನಾ ಪೊಲೀಸ್ ಕಸ್ಟಡಿಯಲ್ಲಿ ಎರಡು ದಿನ ಕಾಲ ಕಳೆದಿದ್ದು, ಇನ್ನು ಮೂರು ದಿವಸ ಪೊಲೀಸರಿಗೆ ನಟಿಯರ ತನಿಖೆ ನಡೆಸಲು ಸಮಾಯಾವಾಕಾಶ ಇದೆ. ಮತ್ತೊಂದೆಡೆ ರಾಗಿಣಿ ಇನ್ನೆರಡು ದಿನ ಪೊಲೀಸ್ ಕಸ್ಟಡಿಯಲ್ಲಿದ್ದು ಮುಂದೆ ಪೊಲೀಸರು ಆಕೆಯನ್ನ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳೋದಾ ಬೇಡವಾ ಅನ್ನೋದರ ಬಗ್ಗೆ ನಿರ್ಧಾರ ಮಾಡಲಿದ್ದಾರೆ.
ರಾಗಿಣಿ ಪೊಲೀಸರ ತನಿಖೆಗೆ ಅಷ್ಟೊಂದು ಸಹಕಾರ ನೀಡುತ್ತಿಲ್ಲವಂತೆ. ಹೀಗಾಗಿ ಪೊಲೀಸರು ಬೇರೆ ರೀತಿಯಾಗಿ ಸಾಕ್ಷ್ಯ ಕಲೆಹಾಕಿದ್ದಾರೆ. ಸಾಕ್ಷ್ಯ ಕಲೆಹಾಕಿದ ವೇಳೆ ಮಾದಕ ಲೋಕದಲ್ಲಿ ರಾಗಿಣಿಗೆ ಎರಡು ಮೂರು ಹೆಸರು ಇರುವುದು ಪತ್ತೆಯಾಗಿದೆ ಎನ್ನಲಾಗಿದೆ. ರಾಗಿಣಿ ಅಲಿಯಾಸ್ ಗಿಣಿ, ರಾಗಿಣಿ ಅಲಿಯಾಸ್ ರಾಗ್ಸ್ ಅನ್ನೋ ಹೆಸರು ಇದೆಯಂತೆ. ಸದ್ಯ ಈಕೆ ಪಂಚತಾರಾ ಹೋಟೆಲ್, ಹಾಗೆ ಡಾಬಾಗಳಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವಿಚಾರ ಕೂಡ ತಿಳಿದು ಬಂದಿದೆ ಎನ್ನಲಾಗುತ್ತಿದ್ದು, ಸದ್ಯ ರಾಗಿಣಿಯಿಂದ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಪಡೆಯಲಿದ್ದಾರೆ.