ಬೆಂಗಳೂರು: ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕವಾಗಿ ಕೊರೊನಾ ತಪಾಸಣಾ ಕೇಂದ್ರ ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರದ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯ ಇಲಾಖೆಯ ಜೊತೆಗೆ ಮಾತುಕತೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ತುರ್ತು ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಬಗ್ಗೆ ಚರ್ಚೆ ನಡೆಯಿತು. ಕ್ವಾರಂಟೈನ್ ಕೇಂದ್ರ, ಚೆಕ್ ಪೋಸ್ಟ್, ಕೋವಿಡ್ ಸೆಂಟರ್, ಪರೀಕ್ಷಾ ಕೇಂದ್ರ, ಸೀಲ್ ಡೌನ್ ಏರಿಯಾ ಸೇರಿ ಎಲ್ಲಾ ಕಡೆ ಪೊಲೀಸರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗೂ ಹೆಚ್ಚಾಗಿ ಸೋಂಕು ತಗುಲುತ್ತಿದೆ. ಬೆಂಗಳೂರಿನಲ್ಲಿ 59 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 6 ಠಾಣೆಗಳನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿರುವ ಹಿನ್ನೆಲೆ ಸಿಬ್ಬಂದಿಗೆ ಪ್ರತ್ಯೇಕವಾಗಿ ಒಂದು ಕೊರೊನಾ ತಪಾಸಣಾ ಕೇಂದ್ರ ಮತ್ತು ಕೋವಿಡ್-19 ಚಿಕಿತ್ಸಾ ಕೇಂದ್ರ ಮೀಸಲಿಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗುತ್ತದೆ. ಪೊಲೀಸ್ ಸಿಬ್ಬಂದಿ ಬೇಗ ಗುಣಮುಖರಾಗಿ ಸೇವೆಗೆ ಹಾಜರಾಗಲು ಇದು ಸಹಕಾರಿಯಾಗಲಿದೆ ಎಂದರು.