ಬೆಂಗಳೂರು: ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರು ಆರೋಗ್ಯ ಸೇವೆಗಳು ಸಂಪೂರ್ಣವಾಗಿ ಒಂದು ಪ್ರಾಧಿಕಾರದಡಿ ಬರಬೇಕು. ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುತ್ತದೆ. ವೈದ್ಯರು ದೇವರ ಪ್ರತಿನಿಧಿಗಳು, 108ಕ್ಕೆ ಜಿಪಿಎಸ್ ಅಳವಡಿಸಿ ಲ್ಯಾನ್ ವ್ಯವಸ್ಥೆ ಕಲ್ಪಿಸಿದಲ್ಲಿ ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ. ಜೀವ ಉಳಿಸುವ ಎಲ್ಲಾ ಪರಿಕರಗಳನ್ನು ವಾಹನದಲ್ಲಿ ವ್ಯವಸ್ಥೆ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಆರೋಗ್ಯ ಮೂಲಸೌಕರ್ಯಗಳು ಹೆಚ್ಚಲಿವೆ. ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ಇದೊಂದು ಪಿಡುಗಾಗಿದ್ದು, ವಿಶ್ವದಲ್ಲಿ ಅತೀ ಹೆಚ್ಚು ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳಿಗೆ ಅಂಧತ್ವ ಉಂಟಾಗುತ್ತಿದೆ. ಕಟ್ಟ ಕಡೆಯ ವ್ಯಕ್ತಿಗೆ ಆರೋಗ್ಯ ಸಮಸ್ಯೆ ನಿವಾರಿಸಲು ಪ್ರಯತ್ನ ಮಾಡಬೇಕು. ಆರೋಗ್ಯ ಸೇವೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಸಮುದಾಯದ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಿಎಂ ಹೇಳಿದರು.
ಆರೋಗ್ಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಇದರಲ್ಲಿ ಆಲಸ್ಯ, ಬೇಜವಾಬ್ದಾರಿ ಇರಬಾರದು. ವೈದ್ಯಕೀಯ ಕೆಲಸ ದೇವರು ಮೆಚ್ಚುವ ಕೆಲಸ. ಕರ್ನಾಟಕ ಆರೋಗ್ಯ ಕರ್ನಾಟಕವಾಗಲಿ ಎಂದು ಬೊಮ್ಮಾಯಿ ಆಶಿಸಿದರು.
ಇದನ್ನೂಓದಿ: ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡನ ವಿರುದ್ಧ ಮಹಿಳೆಯಿಂದ ಪೊಲೀಸರಿಗೆ ದೂರು