ಬೆಂಗಳೂರು: ಆರ್ಎಸ್ಎಸ್ನ ಹಿರಿಯ ಪ್ರಚಾರಕ ಮದನ್ ದಾಸ್ ದೇವಿ (81 ವರ್ಷ ವಯಸ್ಸು) ಇಂದು ಮುಂಜಾನೆ 5 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮದನ್ ದಾಸ್ ದೇವಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ 1.30ರಿಂದ 4ರ ತನಕ ಬೆಂಗಳೂರಿನ ಆರ್ಎಸ್ಎಸ್ ಕಾರ್ಯಾಲಯ ಕೇಶವ ಕೃಪಾದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಮಹಾರಾಷ್ಟ್ರದ ಪುಣೆಯಲ್ಲಿ ಅಂತ್ಯಕ್ರಿಯೆ ಜರುಗಲಿದೆ.
ಜ್ಯೇಷ್ಠ ಪ್ರಚಾರಕರಾಗಿದ್ದ ಮದನ್ ದಾಸ್ ದೇವಿ, ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದರು.
ಮದನ್ ದಾಸ್ ದೇವಿ ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರ್ಮಾಳ ಗ್ರಾಮಕ್ಕೆ ಸೇರಿದವರು. ಶಾಲಾ ಶಿಕ್ಷಣದ ನಂತರ, ಉನ್ನತ ಶಿಕ್ಷಣಕ್ಕಾಗಿ 1959 ರಲ್ಲಿ ಪುಣೆಯ ಪ್ರಸಿದ್ಧ ಬಿಎಂಸಿಸಿ ಕಾಲೇಜಿನಲ್ಲಿ ಪ್ರವೇಶ ಪಡೆದರು. M.Com ಸ್ನಾತಕೋತ್ತರ ಪದವಿಯ ನಂತರ, ILS ಕಾನೂನು ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ LLB ವ್ಯಾಸಂಗ ಪೂರ್ಣಗೊಳಿಸಿದರು. ನಂತರ ಸಿಎ ಮಾಡಿದರು. ಪುಣೆಯಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸಮಯದಲ್ಲಿ ಹಿರಿಯ ಸಹೋದರ ಖುಶಾಲ್ದಾಸ್ ದೇವಿಯವರ ಪ್ರೇರಣೆಯಿಂದ ಸಂಘದ ಸಂಪರ್ಕಕ್ಕೆ ಬಂದರು.
1964 ರಿಂದ ಮುಂಬೈನಲ್ಲಿ ಎಬಿವಿಪಿಯ ಕೆಲಸವನ್ನು ಪ್ರಾರಂಭಿಸಿದರು. 1966ರಲ್ಲಿ ಎಬಿವಿಪಿ ಮುಂಬೈನ ಕಾರ್ಯದರ್ಶಿಯಾದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕರ್ಣಾವತಿ ರಾಷ್ಟ್ರೀಯ ಸಮಾವೇಶದಲ್ಲಿ (1968) ಪೂರ್ಣಾವಧಿ ಕಾರ್ಯಕರ್ತರಾಗಿ ಮತ್ತು ಪಶ್ಚಿಮಾಂಚಾಲ ಕ್ಷೇತ್ರೀಯ ಸಂಘಟನಾ ಮಂತ್ರಿಯಾಗಿ ಜವಾಬ್ದಾರಿಯನ್ನು ಘೋಷಿಸಲಾಯಿತು.
1970ರಿಂದ 1992ರವರೆಗೆ ಸತತ 22 ವರ್ಷಗಳ ಕಾಲ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಅವರು ದೇಶಾದ್ಯಂತ ತಾಲೂಕು, ಮಹಾವಿದ್ಯಾಲಯ ಮತ್ತು ನಗರ ಮಟ್ಟದಲ್ಲಿ ಸುಸಂಸ್ಕೃತ ಕಾರ್ಯಕರ್ತರ ತಂಡದ ಸ್ಥಾಪನೆಗೆ ವಿಶೇಷ ಗಮನ ಹರಿಸಿದ್ದರು. ಸಂಘಟನೆಯ ಅಡಿಗಲ್ಲಿನಂತೆ ಕಾರ್ಯನಿರ್ವಹಿಸಿ ಎಬಿವಿಪಿಯನ್ನು ಹೆಸರಿಗೆ ತಕ್ಕಂತೆ ಅಖಿಲ ಭಾರತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾದರು. ದೇಶಾದ್ಯಂತ ಅನೇಕ ಸಮರ್ಪಿತ ಕಾರ್ಯಕರ್ತರನ್ನು ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
1991 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರಕ್ ಪ್ರಮುಖ್ ಆಗಿ ಮತ್ತು 1993 ರಲ್ಲಿ ಸಂಘದ ಸಹ-ಸರಕಾರ್ಯವಾಹರಾಗಿ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದರು.
ಆರ್ಎಸ್ಎಸ್ ನಾಯಕರ ಸಂತಾಪ:ಆರ್ಎಸ್ಎಸ್ ಪ್ರಚಾರಕರು ಮತ್ತು ಹಿಂದಿನ ಸಹಸರಕಾರ್ಯವಾಹರಾದ ಮದನ್ ದಾಸ್ ದೇವಿ ಅವರ ನಿಧನಕ್ಕೆ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮತ್ತು ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ. ಸಂಘದ ಕಾರ್ಯಚಟುವಟಿಕೆಗಳನ್ನು ನಿಭಾಯಿಸಿದ ಕ್ಷಣಗಳನ್ನು ಅವರು ಸ್ಮರಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಅವರೊಂದಿಗಿನ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ದೇವಿ ತಮ್ಮ ಜೀವನವನ್ನು ದೇಶ ಸೇವೆಗೆ ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಿ ಹೇಳಿದ್ದಾರೆ. ದೇವಿ ಅವರೊಂದಿಗೆ ತಾವೂ ನಿಕಟ ಸಂಬಂಧವನ್ನು ಹೊಂದಿದ್ದು, ಎಲ್ಲಾ ಸಮಯದಲ್ಲೂ ಅವರಿಂದ ಸಾಕಷ್ಟು ಕಲಿತಿರುವುದಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನಿತಿನ್ ಗಡ್ಕರಿ ಸಂತಾಪ: ಗೌರವಾನ್ವಿತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಮದನ್ ದಾಸ್ ದೇವಿ ಅವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ವಿದ್ಯಾರ್ಥಿ ಜೀವನದಿಂದ ಅವರೊಂದಿಗೆ ಕೆಲಸ ಮಾಡಲು ಮತ್ತು ಅವರಿಂದ ಸಂಘಟನಾ ಕೌಶಲ್ಯಗಳನ್ನು ಕಲಿಯಲು ನನಗೆ ಅವಕಾಶ ಸಿಕ್ಕಿತ್ತು. ಚಾರ್ಟರ್ಡ್ ಅಕೌಂಟೆಂಟ್‌ನಲ್ಲಿ ಚಿನ್ನದ ಪದಕ ಪಡೆದ ನಂತರವೂ ಅವರು ದೇಶ ಮತ್ತು ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು, ಪ್ರಚಾರಕರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ವಿದ್ಯಾರ್ಥಿ ಪರಿಷತ್ತಿನ ಮೂಲಕ ದೇಶದ ಕೋಟ್ಯಂತರ ಯುವಕರಿಗೆ ಸ್ಫೂರ್ತಿ ತುಂಬಿದರು. ದೇಶವು ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದೆ. ಮದನ್ ದಾಸ್ ದೇವಿ ಜೀ ಅವರ ಕೆಲಸ ಹಾಗೂ ಅವರ ಮೌಲ್ಯಗಳು ನನ್ನಂತಹ ಕೋಟ್ಯಾಂತರ ಕಾರ್ಯಕರ್ತರಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ಅಗಲಿದ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ಓಂ ಶಾಂತಿ ಎಂದು ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಸಂತಾಪ:ಆರ್ಎಸ್ಎಸ್ ಪ್ರಚಾರಕರು ಮತ್ತು ಹಿಂದಿನ ಸಹಸರಕಾರ್ಯವಾಹರಾದ ಮದನ್ ದಾಸ್ ದೇವಿ ಅವರ ನಿಧನ ಆಘಾತಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿಯೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಅವರ ನಿಧನ ಅತ್ಯಂತ ನೋವು ತಂದಿದೆ ಎಂದು ತಿಳಿಸಿದ್ದಾರೆ. ದೇವರು ಮೃತರ ಆತ್ಮಕ್ಕೆ ದೇವರು ಸದ್ಗತಿ ಕರುಣಿಸಲಿ, ಕುಟುಂಬದವರಿಗೆ ಮತ್ತು ಅವರ ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ಚಾಪ್ಲಿನ್ ನಿಧನ