ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ ಬೆಂಗಳೂರು :ಮುಂದಿನ ಎರಡೂವರೆ ವರ್ಷದ ಬಳಿಕ ಸಂಪುಟದ ಹಿರಿಯ ಸಚಿವರು ಬೇರೆಯವರಿಗೆ ಅವಕಾಶ ನೀಡುವುದು ಒಳ್ಳೆಯದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ಭಾರತ್ ಜೋಡೋ ಸಭಾಂಗಣದಲ್ಲಿ ಇಂದು ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಆಯ್ಕೆ ಮಾಡುವುದು ಹೈಕಮಾಂಡ್ ನಿರ್ಧಾರ. ಆದರೆ ಕೆಲವು ಹಿರಿಯರು ಸಚಿವ ಸ್ಥಾನವನ್ನು ಬಿಟ್ಟುಕೊಡುವುದು ಉತ್ತಮ ಎಂದರು.
ಡಿಸಿಸಿ ಅಧ್ಯಕ್ಷರನ್ನು ನಿಗಮ, ಮಂಡಳಿಗಳಿಗೆ ನೇಮಕ ಮಾಡಿ. ಆ ಮೂಲಕ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಮನವಿ ಮಾಡಿದರು. ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸಚಿವರ ಹೇಳಿಕೆಯನ್ನು ಸ್ವಾಗತಿಸಿದರು.
ಮಾಜಿ ಸಿಎಂ ವೀರಪ್ಪ ಮೊಯಿಲಿ ಮಾತನಾಡಿ, "ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ನವರು ಮಾತಾಡ್ತಿದ್ದಾರೆ. ಕುಮಾರಸ್ವಾಮಿಯವರು ಇಂದು ಬಿಜೆಪಿಯ ಅಧಿಕೃತ ವಕ್ತಾರರ ರೀತಿ ಮಾತಾಡ್ತಿದಾರೆ. ಇದನ್ನು ನೋಡಿದ್ರೆ ಜೆಡಿಎಸ್‌ಗೆ ಮುಂದೆ ಭವಿಷ್ಯವೇ ಇಲ್ಲ ಎಂದು ಗೋಚರಿಸುತ್ತಿದೆ" ಎಂದು ಹೇಳಿದರು.
ಇತ್ತೀಚೆಗೆ ಗಮನ ಸೆಳೆದ ಬಿ.ಕೆ.ಹರಿಪ್ರಸಾದ್ ಹೇಳಿಕೆ: ಇನ್ನೊಂದೆಡೆ, "ನನಗೆ ಸಚಿವ ಸ್ಥಾನ ಕೊಡಲಿಲ್ಲ ಅಂತ ಅಸಮಾಧಾನ ಇಲ್ಲ. ನನಗೆ ಅಸಮಾಧಾನ ಇರುವುದು ಇರುವ ವ್ಯವಸ್ಥೆಯ ವಿರುದ್ಧ" ಎಂದು ಕಾಂಗ್ರೆಸ್ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (ಆಗಸ್ಟ್ 4-2023) ಹೇಳಿದ್ದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ್ದ ಅವರು, "ನಾನು ಎಂದೂ ಸಚಿವ ಸ್ಥಾನ ಕೇಳಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೇಲ್ಮನೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ತನ್ನದೇ ಆದ ಚರಿತ್ರೆ ಮೇಲ್ಮನೆ ಸಭೆಗಿದೆ. ಅದು ಹಾಳಾಗಬಾರದು. ನಾನು ಕೆಪಿಸಿಸಿಯ ಯಾವುದೇ ಸ್ಥಾನಮಾನದ ಆಕಾಂಕ್ಷಿ ಅಲ್ಲ. ನಾನು ಅಖಿಲ ಭಾರತ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸಿದ್ದೀನಿ. ಈಗ ಕೆಪಿಸಿಸಿ ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ನನಗೆ ಬೇಡ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರೇ ಲೋಕಸಭೆಯವರೆಗೆ ಅಧ್ಯಕ್ಷರಾಗಿರುತ್ತಾರೆ" ಎಂದಿದ್ದರು.
ಅಜಯ್ ಸಿಂಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಪಟ್ಟ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ಅಜಯ್ ಸಿಂಗ್ ಅವರನ್ನು ನೇಮಿಸಿ ಸಿಎಂ ಸಿದ್ದರಾಮಯ್ಯ (ಆಗಸ್ಟ್ 10-2023) ಆದೇಶಿಸಿದ್ದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿನಿಯಮ 2013ರ ನಿಯಮಿತ ಅನ್ವಯ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 11 ಸದಸ್ಯರನ್ನೊಳಗೊಂಡಂತೆ ಮಂಡಳಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿತ್ತು.
ಸಚಿವ ಸ್ಥಾನ ಸಿಗದಿದ್ದಕ್ಕೆ ಜೇವರ್ಗಿ ಕ್ಷೇತ್ರದ ಶಾಸಕ ಅಜಯ್ ಸಿಂಗ್ ತೀವ್ರ ಅಸಮಾಧಾನಗೊಂಡಿದ್ದರು. ಈ ಸಂಬಂಧ ಕೆಲ ದಿನಗಳಿಂದ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. ಆಗಸ್ಟ್ 5 ರಂದು ಕಲಬುರಗಿಯಲ್ಲಿ ನಡೆದ 'ಗೃಹ ಜ್ಯೋತಿ' ಕಾರ್ಯಕ್ರಮದಲ್ಲಿ ಕೂಡ ಅಜಯ್ ಸಿಂಗ್ ಗೈರಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಇದನ್ನೂ ಓದಿ:ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಅಜಯ್ ಸಿಂಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಪಟ್ಟ