ಬೆಂಗಳೂರು:ಖಾತೆ ಹಂಚಿಕೆಗೆ ಲಾಬಿ ನಡೆಸಲು ಸಿಎಂ ಬಿಎಸ್ವೈ ನಿವಾಸಕ್ಕೆ ಆಗಮಿಸಿದ ಹಿರಿಯ ಸಚಿವರು ಸಿಎಂ ಎದುರಿಗೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಸಂಧಾನ ಸಭೆಯಲ್ಲಿ ಸಿಎಂ ಮುಂದೆಯೇ ಕಿತ್ತಾಡಿದ ಕತ್ತಿ-ಸವದಿ: ಮೂಕ ಪ್ರೇಕ್ಷಕರಾದ್ರಾ ಬಿಎಸ್ವೈ? - kannadanews
ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಖಾತೆಗಳಿಗಾಗಿ ಹಿರಿಯ ಸಚಿವರು ಕೊನೆ ಹಂತದ ಲಾಭಿ ನಡೆಸಿದ್ದು,ಸಿಎಂ ಎದುರೇ ಖಾತೆಗಾಗಿ ಜಟಾಪಟಿ ನಡೆಸಿದ್ದಾರೆ.
ತಮ್ಮ ನಿವಾಸದಲ್ಲಿ ಉಮೇಶ್ ಕತ್ತಿ ಮನವೊಲಿಸಲು ಸಿಎಂ ನಡೆಸಿದ ಎರಡನೇ ಯತ್ನವೂ ವಿಫಲವಾಗಿದೆ. ಉಮೇಶ್ ಕತ್ತಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ ಸಿಎಂ, ನಂತರ ಸಚಿವ ಲಕ್ಷ್ಮಣ ಸವದಿಯನ್ನು ಕರೆಸಿಕೊಂಡು ಇಬ್ಬರೊಂದಿಗೂ ಮಾತುಕತೆ ನಡೆಸಿದರು. ಆದರೆ ಸಂಧಾನದ ಬದಲು ಅಲ್ಲಿ ಜಗಳವೇ ನಡೆದು ಹೋಗಿದೆ. ಯಡಿಯೂರಪ್ಪ ಎದುರೇ ಉಮೇಶ್ ಕತ್ತಿ - ಲಕ್ಷ್ಮಣ್ ಸವದಿ ನಡುವೆ ಜಟಾಪಟಿ ನಡೆದಿದೆ. ಸಚಿವ ಸ್ಥಾನ ತಪ್ಪಿದ್ದಕ್ಕೂ ನನಗೂ ಸಂಬಂಧವಿಲ್ಲ,ಹೈಕಮಾಂಡ್ ನನ್ನ ಕೆಲಸ ಗುರುತಿಸಿ ಮಂತ್ರಿ ಮಾಡಿದೆ, ನನ್ನ ವಿಚಾರಕ್ಕೆ ಯಾಕ್ ಬರ್ತೀರಾ ಎಂದು ಸಚಿವ ಸವದಿ ಕತ್ತಿಗೆ ಕೇಳಿದ್ದಾರೆ, ಸವದಿ ಮಾತಿನಿಂದ ಸಿಟ್ಟಾದ ಉಮೇಶ್ ಕತ್ತಿ, ಎಲ್ಲ ನಿನ್ನಿಂದಲೇ ಆಗಿದ್ದು, ಹೈಕಮಾಂಡ್ನಲ್ಲಿ ಲಾಬಿ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದೀ ನಿನ್ನ ಹಾಗೆ ಇನ್ನೊಬ್ಬರ ಶಿಫಾರಸಿನ ಮಂತ್ರಿಗಿರಿ ನಾನು ಕೇಳಲ್ಲ ಎಂದು ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಬ್ಬರನ್ನೂ ಸಮಾಧಾನ ಮಾಡಲು ಹೈರಾಣಾದ ಸಿಎಂ ಮನವೊಲಿಕೆ ಮಾಡುವಲ್ಲಿ ವಿಫಲರಾದರು. ಕೊನೆಗೆ ಏನಾದ್ರೂ ಮಾಡಿಕೊಳ್ಳಿ ನನ್ನ ದಾರಿ ನನಗೆ ಎಂದು ಕತ್ತಿ ಸಿಟ್ಟಿನಿಂದ ಹೊರಟರು ಎನ್ನಲಾಗಿದೆ. ಯಡಿಯೂರಪ್ಪ ನಿವಾಸದಿಂದ ಸಿಟ್ಟಿಂದ ಹೊರಬಂದ ಉಮೇಶ್ ಕತ್ತಿ, ಸಂಪುಟ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ಕೇಳಿದ್ರೆ ಮಾಧ್ಯಮಗಳ ವಿರುದ್ಧವೂ ಸಿಟ್ಟಿನಿಂದಲೇ ಮಾತನಾಡಿ ತೆರಳಿದರು.ಇತ್ತ ನೂತನ ಸಚಿವರಾದ ವಿ. ಸೋಮಣ್ಣ,ಬಸವರಾಜ ಬೊಮ್ಮಾಯಿ,ಗೋವಿಂದ ಕಾರಜೋಳ ಸೇರಿದಂತೆ ಹಲವು ಸಚಿವರು ಸಿಎಂ ಜೊತೆ ಖಾತೆಗಾಗಿ ಲಾಬಿ ನಡೆಸಿದ್ದಾರೆ. ಇನ್ನೂ ಡಿಸಿಎಂ ಹುದ್ದೆಗಳ ಸಂಬಂಧವೇ ಯಡಿಯೂರಪ್ಪ ಲಕ್ಷ್ಮಣ ಸವದಿ, ಅಶ್ವತ್ಥ್ ನಾರಾಯಣ ಮತ್ತು ಕಾರಜೋಳ ಅವರನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಈ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ಇದರ ಬಗ್ಗೆ ವಿವರ ನೀಡಲು ನಾಯಕರು ನಿರಾಕರಿಸಿದರು.