ಬೆಂಗಳೂರು: ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ ಹಿರಿಯ ಪತ್ರಕರ್ತ ಕೆ.ಎಸ್.ಸಚ್ಚಿದಾನಂದ ಮೂರ್ತಿ (75) ಇಂದು ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸಚ್ಚಿದಾನಂದ ಮೂರ್ತಿ ಕೆಲವು ದಿನಗಳ ಹಿಂದೆ ಶ್ವಾಸಕೋಶ ಕಸಿಗೆ ಒಳಗಾಗಿದ್ದರು. ಎರಡೂ ಶ್ವಾಸಕೋಶ ಕಸಿ ಮಾಡಲಾಗಿತ್ತು. ನಂತರ ಚೇತರಿಸಿಕೊಂಡಿದ್ದರು. ಇತ್ತೀಚೆಗೆ ಮತ್ತೆ ಶ್ವಾಸಕೋಶ ಸೋಂಕು ಉಲ್ಬಣಿಸಿದೆ. ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಸಚ್ಚಿ ಅವರ ನಿಧನಕ್ಕೆ ಮಾಧ್ಯಮ ರಂಗ ಕಂಬನಿ ಮಿಡಿದಿದೆ. ಜಯನಗರ ಟಿ.ಬ್ಲಾಕ್‍ನ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ 6 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕೋಲಾರ ಮೂಲದ ಸಚ್ಚಿದಾನಂದ ಮೂರ್ತಿ 1982ರಲ್ಲಿ ದಿ ವೀಕ್ ಸೇರಿದ್ದು, ಬಳಿಕ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮಲಯಾಳ ಮನೋರಮಾ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿಯೂ ಕೆಲಸ ಮಾಡಿದ್ದರು. ದೆಹಲಿಯಲ್ಲಿ 4 ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಎಡಿಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಬಿ.ಎಸ್.ಯಡಿಯೂರಪ್ಪ ಸಂತಾಪ:ಸಚ್ಚಿದಾನಂದ ಮೂರ್ತಿಯವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಅಗಲಿಕೆಯಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ಪರಿಣತ ಪತ್ರಕರ್ತರನ್ನು ನಾವು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬ ಸದಸ್ಯರಲ್ಲಿ ಸಾಂತ್ವನ ವ್ಯಕ್ತಪಡಿಸುತ್ತೇನೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಸಂತಾಪ:ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ (ಸಚ್ಚಿ) ಅವರ ನಿಧನದ ಸುದ್ದಿ ಅತ್ಯಂತ ನೋವಿನ ಸಂಗತಿ. ರಾಷ್ಟ್ರಮಟ್ಟದಲ್ಲಿ ಪತ್ರಿಕೋದ್ಯಮದ ಮೂಲಕ ತಮ್ಮದೇ ಆದ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದು:ಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿಯೆಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ಕ್ಯಾನ್ಸರ್ ವಿರುದ್ಧ ಹೋರಾಟ: ಚೋರಿ ಚೋರಿ ಚುಪ್ಕೆ ಚುಪ್ಕೆ ನಟಿ ವಿಧಿವಶ!