ಬೆಂಗಳೂರು: ಬಿಬಿಎಂಪಿಯಲ್ಲಿ, ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಕೊನೆಕೊಂಡಿದ್ದು, ಮುಂದಿನ ಚುನಾವಣೆಯವರೆಗೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.
ಇಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಗೌರವ್ ಗುಪ್ತಾ, ಸರ್ಕಾರದ ಆದೇಶದ ನಿಮಿತ್ತ ಈಗಾಗ್ಲೇ ಅಧಿಕಾರ ಸ್ವೀಕರಿಸಿದ್ದೇನೆ. ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಕೋವಿಡ್, ಮಳೆ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಗೌರವ್ ಗುಪ್ತಾ ರಾಜ್ಯ ಸರ್ಕಾರದ ನೆರವು ಇರಲಿದೆ. ಹಾಗೆಯೇ ಬಿಬಿಎಂಪಿಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದಾಯದ ಮೂಲಗಳನ್ನು ಬಲಪಡಿಸಿ, ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆಯೂ ಸರ್ಕಾರದ ಗಮನಕ್ಕೆ ಈಗಾಗಲೇ ಪ್ರಸ್ತಾವನೆ ಹೋಗಿದ್ದರೆ ಅದನ್ನೂ ಸಮರ್ಪಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಕ್ತಾಯ ಆದ ಬಳಿಕ ಎಲ್ಲಾ ಹಂತದ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಪ್ರತಿಯೊಬ್ಬರು, ಜನರ ಸಂಪರ್ಕದಲ್ಲಿರಬೇಕು, ಜನರಿಗೆ ಏನೇ ಕುಂದುಕೊರತೆಗಳಿದ್ದರೂ, ಬಗೆಹರಿಸಲು, ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಬೇಕು. ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಏನೆಲ್ಲಾ ಮಾರ್ಗಸೂಚಿ, ಟಾರ್ಗೆಟ್ ಗಳನ್ನು ನೀಡಿದೆಯೋ ಅದನ್ನು ಪಾಲಿಸಲಾಗುವುದು ಎಂದು ತಿಳಿಸಿದರು.
ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿರೋದರಿಂದ ಮುಂದಿನ ಚುನಾವಣೆವರೆಗೆ ಮಾತ್ರ ಸ್ವಲ್ಪ ಸಮಯದ ಅವಧಿ ಇರೋದ್ರಿಂದ ಯಾವುದೇ ಹೊಸ ಯೋಜನೆ ಇಲ್ಲದೆ ಇರುವ ಯೋಜನೆಗಳನ್ನೇ ಸಮರ್ಪಕವಾಗಿ ಮುಂದುವರಿಸಲಾಗುವುದು. ಆಡಳಿತಾಧಿಕಾರಿ ಸೇರಿದಂತೆ ಪ್ರತಿಯೊಬ್ಬ ಅಧಿಕಾರಿಗಳೂ ಜನರ ಸೇವೆಗೆ ಲಭ್ಯವಾಗಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆನ್ಲೈನ್ ಮೂಲಕವೂ ಸ್ಪಂದಿಸಲಾಗುವುದು ಎಂದು ಹೇಳಿದರು.