ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ವ್ಯಾಪ್ತಿಗೆ ಬರುವ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಜೊತೆಗೆ, ಪಶ್ಚಿಮ ವಲಯದ ಪ್ರಮುಖ ಕೋವಿಡ್ ಆಸ್ಪತ್ರೆಯೂ ಆಗಿದೆ. ಕಳೆದ ವರ್ಷ ಕೋವಿಡ್ ಆರಂಭವಾದಾಗ ಲಾಕ್ಡೌನ್ ಹೇರಿದ ಹಿನ್ನೆಲೆ ಹೆಚ್ಚಿನ ಬೆಡ್ಗಳನ್ನು ಕೋವಿಡ್ಗೆಂದೇ ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಇದರಿಂದ ಬೆಡ್ ಸಮಸ್ಯೆಯ ಜೊತೆಗೆ ಸಿಬ್ಬಂದಿ ಕೊರತೆಯೂ ಉಲ್ಬಣವಾಗುತ್ತಿದೆ.
ಹೆಚ್ಚಿನ ವೈದ್ಯರು 50 ವರ್ಷ ಮೇಲ್ಪಟ್ಟವರಾಗಿರುವುದರಿಂದ ಹೆಚ್ಚಿನವರಿಗೆ ಡಯಾಬಿಟಿಸ್ ಮುಂತಾದ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಕೋವಿಡ್ ಚಿಕಿತ್ಸೆ ನೀಡಲು ಬಹುತೇಕ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆ.ಸಿ ಜನರಲ್ ವೈದ್ಯರೊಬ್ಬರು ತಿಳಿಸಿದರು. ಅಗತ್ಯವಾದಷ್ಟು ಸಿಬ್ಬಂದಿ - ವೈದ್ಯರು ಇದ್ದರೂ ಕೂಡಾ ಎಲ್ಲರೂ ಕೋವಿಡ್ ಚಿಕಿತ್ಸೆಗೆ ಮುಂದಾಗದೇ ಇರುವುದು ಉಳಿದ ವೈದ್ಯರ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ.
ಎಷ್ಟೋ ವೈದ್ಯರು ದಿನದ 18 ಗಂಟೆಯೂ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹಾಗಾಗಿದೆ. ಆದರೆ, ಕೆಲವರು ಮಾತ್ರ ಅನಾರೋಗ್ಯದ ನೆಪವೊಡ್ಡಿ, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದರಿಂದ ಹಿಂದೆ ಉಳಿಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಐಸಿಯು ಬೆಡ್ ಏರಿಕೆ
ಜೊತೆಗೆ ನಗರದಲ್ಲಿ ಬೆಡ್ ಕೊರತೆ ವಿಚಾರವನ್ನು ಅಲ್ಲಗಳೆದ ಸಚಿವ ಅಶ್ವತ್ಥ ನಾರಾಯಣ್, ಕೆ.ಸಿ ಜನರಲ್ ಆಸ್ಪತ್ರೆಗೆ ಹೆಚ್ಚು ಹೊರೆ ಮಾಡುತ್ತಿಲ್ಲ. ವ್ಯವಸ್ಥೆ ಅನುಸಾರವಾಗಿ ಮಾಡುತ್ತಿದ್ದೇವೆ. 50 ಐಸಿಯು ಬೆಡ್ 100ಕ್ಕೆ ಏರಿಕೆ ಮಾಡಲಾಗ್ತಿದೆ ಎಂದರು.