ಬೆಂಗಳೂರು:ಹೆಸರಾಂತ ಹಿರಿಯ ಚಿಂತಕ, ಸಾಹಿತಿ ಹಾಗು ಪೋಷಕ ನಟ ಪ್ರೊ.ಜಿ.ಕೆ.ಗೋವಿಂದರಾವ್ ಅನಾರೋಗ್ಯದಿಂದ ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಪ್ರೊ.ಜಿ.ಕೆ.ಗೋವಿಂದರಾವ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
'ರಂಗಭೂಮಿ, ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿದ್ದ ಗೋವಿಂದರಾವ್ ಅವರು ತಮ್ಮ ಜನಪರ ನಿಲುವಿನಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಅವರ ನಿಧನದಿಂದ ಒಬ್ಬ ಅನನ್ಯ ಚಿಂತಕನನ್ನು ನಾಡು ಕಳೆದುಕೊಂಡಿದೆ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
'ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಗೋವಿಂದರಾವ್ ಅವರಿಗೆ ಗೌರವ ನಮನಗಳು. ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಹಿರಿಯ ಚಿಂತಕ, ರಂಗಕರ್ಮಿ ಪ್ರೊ ಜಿ.ಕೆ.ಗೋವಿಂದರಾವ್ ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ಚಲನಚಿತ್ರ, ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಹುಬ್ಬಳ್ಳಿಯ ಮುಕ್ತಿಧಾಮದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಗೋವಿಂದ್ ರಾವ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.