ಬೆಂಗಳೂರು :ಎಜುಕೇಶನ್ ಪ್ರೊಮೋಷನ್ ಸೊಸೈಟಿ ಆಫ್ ಇಂಡಿಯಾ (ಇಪಿಎಸ್ಐ), ಕುಪೇಕಾ ಮತ್ತು ಕಾಮೆಡ್-ಕೆ ಸಂಘಟನೆಗಳು ಜತೆಗೂಡಿ ಇಂದು ಎನ್ಇಪಿ ಜಾರಿ : ಶಿಕ್ಷಣ ಸಂಸ್ಥೆಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು’ ವಿಚಾರ ಗೋಷ್ಠಿ ಏರ್ಪಡಿಸಲಾಗಿತ್ತು. ಈ ವಿಚಾರ ಸಂಕಿರಣಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅತಿಥಿಯಾಗಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಭಾರತ ಕೇಂದ್ರಿತವಾಗಿದೆ. ಶಿಕ್ಷಣ ಕ್ರಮದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಮೂಲಕ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಯನ್ನು ಗುರಿಯಾಗಿ ಹೊಂದಿದೆ. ಇದರ ಅನುಷ್ಠಾನದಲ್ಲಿ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಎನ್ಇಪಿ ಜಾರಿಗೊಳಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನೆಲ್ಲ ಕೈಗೊಂಡಿದ್ದು, ಶಾಲಾ ಶಿಕ್ಷಣ, ಉನ್ನತ ಶಿಕ್ಷಣದ ಪಠ್ಯಕ್ರಮ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ಸುಧಾರಣೆಗಳತ್ತ ಗಮನಹರಿಸಿದೆ. ಇದಕ್ಕೆ ತಕ್ಕಂತೆ ರಾಜ್ಯದಲ್ಲಿ ಬಹುಶಿಸ್ತಿನ ವಿಧಾನಗಳ ಮೂಲಕ ಮಾದರಿ ಕಾಲೇಜುಗಳನ್ನು ಸ್ಥಾಪಿಸುವ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ಹೇಳಿದರು.
ಎನ್ಇಪಿ ಆಶಯಕ್ಕೆ ತಕ್ಕಂತೆ ರಾಜ್ಯದಲ್ಲಿ ಇನ್ನು 10 ವರ್ಷಗಳಲ್ಲಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯು ಆಧುನೀಕರಣಗೊಳ್ಳಲಿದೆ. ಅದು ವಿದ್ಯಾರ್ಥಿಕೇಂದ್ರಿತವಾಗಲಿದೆ. ಪದವಿ ಮಟ್ಟದಲ್ಲಂತೂ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಯಾವುದೇ ವಿಷಯಗಳನ್ನು ಐಚ್ಛಿಕವಾಗಿ ಓದುವ ಮಾದರಿ ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸೂಕ್ತ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಇರಬೇಕೆನ್ನುವುದು ಸರ್ಕಾರದ ಸಂಕಲ್ಪವಾಗಿದೆ. ಇದಕ್ಕಾಗಿ 21ನೇ ಶತಮಾನದ ಅಗತ್ಯಗಳನ್ನು ಪರಿಗಣಿಸಿ, ಜಾಗತಿಕ ಗುಣಮಟ್ಟದ ಬೋಧನೆಗೆ ಒತ್ತು ನೀಡಿದ್ದೇವೆ. ಅಂತಿಮವಾಗಿ ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ.
ನೂತನ ಶಿಕ್ಷಣ ನೀತಿಯಲ್ಲಿ ಹೇಳಿರುವಂತೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು ಅಸ್ತಿತ್ವಕ್ಕೆ ಬರಲಿದೆ. ಮೂರು ದಶಕಗಳ ನಂತರ ರೂಪಿಸಿರುವ ಈ ನೀತಿಯು ಲಭ್ಯತೆ, ಸಮಾನತೆ, ಗುಣಮಟ್ಟ ಮತ್ತು ಉತ್ತರದಾಯಿತ್ವಗಳನ್ನು ಪ್ರತಿಪಾದಿಸುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನವದೆಹಲಿಯಲ್ಲಿರುವ ಎಐಸಿಟಿಇ ಅಧ್ಯಕ್ಷ ಡಾ.ಅನಿಲ್ ದತ್ತಾತ್ರೇಯ ಸಹಸ್ರಬುದ್ಧೆ, ವೆಲ್ಲೂರು ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮತ್ತು ಕುಲಪತಿ ಡಾ.ಜಿ.ವಿಶ್ವನಾಥ, ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ ಕುಲಪತಿ ಎಂ.ಆರ್.ಜಯರಾಂ, ಇಪಿಎಸ್ಐ ನಿರ್ದೇಶಕ ಡಾ.ಹೆಚ್.ಚತುರ್ವೇದಿ, ಪುಣೆಯಲ್ಲಿರುವ ಎಂಐಟಿ-ಎಡಿಟಿ ವಿವಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಮಂಗೇಶ್ ಟಿ.ಕರಾಡ್ ಉಪಸ್ಥಿತರಿದ್ದರು.