ಬೆಂಗಳೂರು:ಆರ್ಥಿಕವಾಗಿ ಹಿಂದುಳಿದವರಿಗಾಗಿ ಸ್ಥಾಪಿಸಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್) ನಿಗದಿತ ದರಕ್ಕಿಂತೆ ಹೆಚ್ಚಿನ ಬೆಲೆಗೆ ಆಹಾರ ಧಾನ್ಯ ಮಾರಾಟ ಮಾಡುವುದು ಗಂಭೀರ ಸ್ವರೂಪದ ಆರೋಪವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಕೆಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸದೇ ಇರುವುದು, ರಸೀದಿ ನೀಡದಿರುವ ಆರೋಪದಲ್ಲಿ ನ್ಯಾಯಬೆಲೆ ಅಂಗಡಿ ನಡೆಸಲು ನೀಡಿದ್ದ ಪರವಾನಗಿ ರದ್ದುಪಡಿಸಿದ್ದ ಜಿಲ್ಲಾಧಿಕಾರಿಗಳ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಿದ್ದ ಜಿಲ್ಲಾಧಿಕಾರಿಗಳ ಆದೇಶ ಎತ್ತಿ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ರಾಮನಗರ ಜಿಲ್ಲೆಯ ಬಿಡದಿಯ ವಾಜರಹಳ್ಳಿಯ ದಿವಂಗತ ವಿ.ಎಂ.ಸಂಜೀವಯ್ಯ ಅವರ ಕಾನೂನು ವಾರಸುದಾರರು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠ, ಅಧಿಕಾರಿಗಳ ಕ್ರಮವನ್ನು ಎತ್ತಿ ಹಿಡಿದಿದೆ. ಜೊತೆಗೆ, ಆರ್ಥಿಕ ದುರ್ಬಲರು ಮತ್ತು ಬಡತನದ ರೇಖೆಗಿಂತ ಕೆಳಗಿರುವವರಿಗೆ ಆಹಾರ ಧಾನ್ಯಗಳು ಮತ್ತು ಸೀಮೆ ಎಣ್ಣೆಯನ್ನು ನಿಗದಿತ ಬೆಲೆಗೆ ಮಾರಾಟ ಮಾಡುವುದೇ ಸಾರ್ವಜನಿಕ ವಿತರಣಾ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಅಂತಹ ವ್ಯಕ್ತಿಗಳಿಗೆ ನೀಡಬೇಕಾದ ಆಹಾರ ಧಾನ್ಯಗಳನ್ನು ಸರಬರಾಜು ಮಾಡದಿರುವುದು ಅತ್ಯಂತ ಗಂಭೀರ ಸ್ವರೂಪದ ದುಷ್ಕೃತ್ಯವಾಗಿದೆ. ಈ ನಡವಳಿಕೆ ಕಾರ್ಡ್‌ದಾರರನ್ನು ಮೂಲ ಸೌಕರ್ಯಗಳಿಂದ ವಂಚಿಸಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
(ಓದಿ: ಪಡಿತರ ಚೀಟಿ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿ ಹಂಚಿಕೆಯಲ್ಲಿ ಗೊಂದಲ: ಹೈಕೋರ್ಟ್ ಅಸಮಾಧಾನ)