ಬೆಂಗಳೂರು :ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಜನರು ತಮಗೆ ತೋಚಿದ ರೀತಿಯಲ್ಲಿ ಮನೆಯಲ್ಲಿಯೇ ಸಿಕ್ಕ ಸಿಕ್ಕ ಔಷಧ, ಕಷಾಯಗಳನ್ನ ಮಾಡಿಕೊಂಡಿದ್ದು ಗೊತ್ತೇ ಇದೆ.
ವೈದ್ಯರ ಸಲಹೆ ಇಲ್ಲದೆ ತಮ್ಮಷ್ಟಕ್ಕೆ ತಾವೇ ವೈದ್ಯರಾಗಿ, ಔಷಧಿ ಪಡೆಯುವುದರ ಮೂಲಕ ಅಪಾಯವನ್ನ ಜನರು ಬರಮಾಡಿಕೊಂಡಿದ್ದು ಸತ್ಯ. ಈ ರೀತಿ ಜನ ನಿರ್ಲಕ್ಷ್ಯ ವಹಿಸಿದರೆ ಯಾವೆಲ್ಲಾ ಅಪಾಯಗಳು ಎದುರಾಗುತ್ತವೆ ಎಂಬುದನ್ನು ವೈದ್ಯರು ವಿವರಿಸಿದ್ದಾರೆ.
ಈ ಕುರಿತು ಇಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಗೌರ್ನಮೆಂಟ್ ಆಫ್ ಇಂಡಿಯಾ ಮಿನಿಸ್ಟರ್ ಆಫ್ ಇನ್ಫಾರ್ಮಶನ್ & ಬ್ರಾಡ್ಕಾಸ್ಟಿಂಗ್ ವತಿಯಿಂದ ಸ್ವಯಂ ಔಷಧ ಪಡೆಯುವ ಅಪಾಯದ ಕುರಿತು ವೆಬಿನಾರ್ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ಡಾಕ್ಟರ್ ಪ್ರದೀಪ್ ಬಾನಂದೂರು ಹಾಗೂ ಅಪೊಲೊ ಹಾಸ್ಪಿಟಲ್‌ನ ಹಿಮಲ್ದೇವ್ ಜಿ ಜೆ ಸಂವಾದ ನಡೆಸಿದರು.
ಸಣ್ಣ ಕಾಯಿಲೆ ಅಲ್ವಾ ಎಂಬ ಉದಾಸೀನ
ನಿಮ್ಹಾನ್ಸ್‌ನ ಡಾ. ಪ್ರದೀಪ್ ಬಾನಂದೂರು ಮಾತನಾಡಿ, ನಮ್ಮಷ್ಟಕ್ಕೆ ನಾವೇ ಔಷಧಿಯನ್ನ ಪಡೆಯುವುದು ಒಂದು ರೀತಿಯ ಡೇಂಜರ್.
ಯಾವುದೇ ಔಷಧಿಯನ್ನ ತೆಗೆದುಕೊಳ್ಳುವಾಗ ವೈದ್ಯರ ಸಂಪರ್ಕ ಮಾಡದೇ ನಮಗೆ ನಾವೇ ಸರಿ ಎನಿಸಿದ್ದನ್ನು ಸ್ವೀಕರಿಸುವುದೇ ಸೆಲ್ಫ್ ಮೆಡಿಕೇಶನ್.
ಕೋವಿಡ್ ಟೈಂನಲ್ಲಿ ಕಷಾಯಗಳನ್ನ ಕುಡಿದು ಕಣ್ಣು ಉರಿ, ಮೈ ಬಿಸಿಯಾಗುವುದು ಸೇರಿದಂತೆ ನಾನಾ ಅನಾರೋಗ್ಯ ಸಮಸ್ಯೆಗಳನ್ನ ಅನುಭವಿಸಿದ್ದನ್ನ ಕಂಡಿದ್ದೇವೆ ಅಂದರು.
ಒಂದೊಂದು ಮಾತ್ರೆ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಿರುತ್ತೆ. ಹೀಗಾಗಿ, ಯಾವುದೇ ರೀತಿಯ ಇಂಗ್ಲಿಷ್ ಮೆಡಿಸನ್, ಆಯುರ್ವೇದ, ಹೋಮಿಯೋಪತಿ, ಸಿದ್ಧ ಔಷಧಿಯನ್ನ ಸ್ವಯಂ ವೈದ್ಯರಾಗುವಾಗ ಎಚ್ಚರಿಕೆಯಿಂದ ಇರಬೇಕು ಅಂತ ಸಲಹೆ ನೀಡಿದರು.
ಯಾವುದೇ ಔಷಧವನ್ನ ತೆಗೆದುಕೊಳ್ಳವಾಗಲೂ ಒಂದು ಕ್ರಮ ಇರುತ್ತೆ. ಎಷ್ಟು ಡೋಸ್ ತೆಗೆದುಕೊಳ್ಳಬೇಕು, ತೆಗೆದುಕೊಳ್ಳಬಾರದು ಎಂಬುದನ್ನ ತಿಳಿಯುವುದು ಅತ್ಯಗತ್ಯ.
ಇಲ್ಲವಾದರೆ ಕಡೆ ಹಂತದಲ್ಲಿ ಆಸ್ಪತ್ರೆ ಸೇರಿ ಔಷಧಿ ಮತ್ತೊಂದು ರೀತಿಯ ದುಷ್ಪರಿಣಾಮ ಬೀರಿ, ಕೈ ಕಾಲು ಊನ, ಕಣ್ಣು ಸಮಸ್ಯೆ, ಕಿಡ್ನಿ ವೈಫಲ್ಯವೆಲ್ಲ ಆಗುವ ಸಾಧ್ಯತೆ ಇರುತ್ತೆ. ಹೀಗಾಗಿ, ಈ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ ಎಂದಿದ್ದಾರೆ.
ಈ ಅಪಾಯ ತಡೆಯುವುದು ಹೇಗೆ?
- ಸ್ವಯಂ ಔಷಧ ಪಡೆಯುವುದು ನಿಲ್ಲಿಸುವುದು
- ಅನಾರೋಗ್ಯ ಉಂಟಾಗದ ವೈದ್ಯರ ಸಂಪರ್ಕ ಮಾಡುವುದು
- ಅನಗತ್ಯವಾಗಿ ಇತರರಿಗೆ ಔಷಧದ ಬಗ್ಗೆ ಉಪದೇಶ ನೀಡದಿರುವುದು
- ಯಾವುದೇ ಔಷಧ ತೆಗೆದುಕೊಳ್ಳುವ ಮುನ್ನ ವೈದ್ಯರಿಗೆ ಮಾಹಿತಿ ನೀಡುವುದು
- ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಔಷಧ ಕುರಿತು ಜಾಗೃತರಾಗಿರಬೇಕು
ಕೋವಿಡ್ ಸೋಂಕಿತರು ಸ್ವಯಂ ಚಿಕಿತ್ಸೆ ಪಡೆಯುವುದು ಎಷ್ಟು ಅಪಾಯ
ಅಪೋಲೊ ಆಸ್ಪತ್ರೆಯ ವೈದ್ಯ ಡಾ. ಹಿಮಾಲ್ ದೇವ್ ಜಿ ಜೆ ಮಾತನಾಡಿ, ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿ ಸ್ವಯಂ ಚಿಕಿತ್ಸೆ ಪಡೆದುಕೊಂಡಿದ್ದು ಇದೆ. ಇದರಿಂದ ಅದೆಷ್ಟೋ ಮಂದಿ ಕೊನೆ ಕ್ಷಣದಲ್ಲಿ ಆಸ್ಪತ್ರೆಯ ಬಾಗಿಲು ತಟ್ಟಿದ್ದು ಇದೆ ಅಂತ ತಿಳಿಸಿದರು.
ಕೊರೊನಾದಲ್ಲಿ ಶೇ. 80ರಷ್ಟು ಜನಕ್ಕೆ ಆಸ್ಪತ್ರೆಯ ಅಗತ್ಯವಿರುವುದಿಲ್ಲ. ಅಂತವರು ಮನೆಯಲ್ಲಿ ಆರೈಕೆ ಮಾಡಿಕೊಳ್ಳಬಹುದು. ಉಳಿದ 20% ರಷ್ಟು ಜನರಿಗೆ ಆಸ್ಪತ್ರೆಯ ಅಗತ್ಯವಿರುತ್ತೆ.
ಹೈರಿಸ್ಕ್ ಕ್ಯಾಟಗರಿಯಲ್ಲಿ ಇರುವ ಹೃದಯ, ಕಿಡ್ನಿ ಸಮಸ್ಯೆ, ಡಯಾಬಿಟಿಸ್, ಬಿಪಿ ಸೇರಿದಂತೆ ಕ್ಯಾನ್ಸರ್ನಂತವರು ಮನೆಯಲ್ಲಿರುವಾಗ ಸ್ಯಾಚುರೇಷನ್ ಲೆವಲ್ ಕಡಿಮೆ ಬಂದಾಗ ಆಸ್ಪತ್ರೆಗೆ ದಾಖಲಾಗುವುದು ಉತ್ತಮ.
ಇದಕ್ಕೂ ಮೊದಲು ಯಾವುದೇ ರೀತಿಯ ವೈದ್ಯರ ಸಲಹೆ ಇಲ್ಲದೇ ಔಷಧಿ ಪಡೆಯುವುದು ಅನಾಹುತಕ್ಕೆ ಕಾರಣವಾಗುತ್ತೆ ಅಂತ ವಿವರಿಸಿದರು.
ಯಾವ್ಯಾವ ಔಷಧಿಯನ್ನ ಮನೆಯಲ್ಲಿ ತೆಗೆದುಕೊಳ್ಳಬಾರದು
1) ಸ್ಟಿರಾಯ್ಡ್
2) ರೆಮ್ಡಿಸೀವಿರ್
3) ಆ್ಯಂಟಿ ಬಯೋಟಿಕ್ಸ್
4) ಮೋನೋಕ್ಲೋನಲ್ ಆಂಟಿ ಬಾಡಿ
ಸ್ಟೀರಾಯ್ಡ್ ಔಷಧ ಸಾಮಾನ್ಯವಾಗಿ ಬಳಸುವುದಲ್ಲ. ಇದರಿಂದ ಎಷ್ಟು ಉಪಯೋಗವಿದ್ಯೋ ಅಷ್ಟೇ ಅಪಾಯವೂ ಇದೆ. ವೈದ್ಯರ ಸಲಹೆ ಇಲ್ಲದೆ ಸ್ಟೀರಾಯ್ಡ್ ಬಳಕೆ ಮಾಡುವುದು ಉತ್ತಮವಲ್ಲ. ಸ್ಯಾಚುರೇಷನ್ ಕಡಿಮೆ ಇದ್ದಾಗ, ಹೈ ರಿಸ್ಕ್ ಇದ್ದವರಿಗೆ ನಿಗದಿತ ಸಮಯ ನೋಡಿ ಕೊಡಬೇಕಾಗುತ್ತೆ.
ಸ್ಟೀರಾಯ್ಡ್‌ನ ರೋಗಿಗಳಿಗೆ ಬೇಗ ಕೊಟ್ಟರೆ ಬ್ಲ್ಯಾಕ್ ಫಂಗಸ್, ಸೆಕೆಂಡರಿ ಇನ್ಪಕ್ಷನ್ ಸಮಸ್ಯೆ ಹೆಚ್ಚಾಗುತ್ತೆ. ಮನೆಯಲ್ಲಿ ಇದ್ದು 10 ದಿನಕ್ಕೂ ಹೆಚ್ಚು ಸಮಯ ಸ್ಟೀರಾಯ್ಡ್ ಬಳಕೆ ಮಾಡುವುದರಿಂದ 'ಮೂಳೆ ಸವೆತ, ಕಣ್ಣು ನೋವು, ದೇಹದಲ್ಲಿ ನೀರಿನಾಂಶ ಹೆಚ್ಚಾಗುವುದು ಸೇರಿದಂತೆ ನೆನಪಿನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ. ಡಯಾಬಿಟಿಸ್ ಇಲ್ಲದೇ ಇದ್ದರೂ ಸ್ಟೀರಾಯ್ಡ್ ನಿಂದ ಡಯಾಬೀಟಿಸ್ ಲೇವಲ್ ಹೆಚ್ಚಾಗಿ ಇರಲಿದೆ.
ರೆಮ್ಡಿಸಿವಿರ್ ಔಷಧ ಬಳಕೆಯು ಎಲ್ಲರ ದೇಹದ ಮೇಲೂ ಕೆಲಸ ಮಾಡುವುದಿಲ್ಲ. ಕಿಡ್ನಿ, ಲಿವರ್ ರೋಗಿಗಳಿಗೆ ರೆಮ್ಡಿಸಿವಿರ್ ಕೊಡುವಾಗ ಜಾಗರೂಕತೆಯಲ್ಲಿ ಇರಬೇಕು. ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ರೆಮ್ಡಿಸಿವಿರ್ ಕೊಡಬಹುದಾ? ಇಲ್ವಾ? ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಆಂಟಿ ಬಯೋಟಿಕ್ಸ್ನಿಂದ ಕೂಡ ಹಲವು ಸಮಸ್ಯೆ ಸೃಷ್ಟಿಯಾಗುತ್ತೆ. ಹೃದಯಘಾತ ಆಗುವ ಸಾಧ್ಯತೆ ಕೂಡ ಹೆಚ್ಚಿರುತ್ತೆ. ಇದನ್ನು ಬಳಕೆ ಮಾಡುವಾಗಲೂ ಎಚ್ಚರದಿಂದ ಇರಬೇಕು. ಕೆಲವೊಮ್ಮೆ ನಿಜಕ್ಕೂ ಆಂಟಿ ಬಯೋಟಿಕ್ಸ್ ಬೇಕಾದ ಸಂದರ್ಭದಲ್ಲಿ ಅದು ದೇಹದಲ್ಲಿ ಕೆಲಸ ಮಾಡದೇ ಇರಬಹುದು ಅಂತ ತಿಳಿಸಿದರು.
ಮೋನೋಕ್ಲೋನಲ್ ಆಂಟಿಬಾಡಿ ಇದು ಕೂಡ ದುಬಾರಿ ಔಷಧ ಆಗಿದ್ದು, ನಾಲ್ಕು ಪಟ್ಟು ಹಣ ಕೊಟ್ಟು ಜನರು ತೆಗೆದುಕೊಂಡಿದ್ದು ಇದೆ. ಇದು ಕೂಡ ಆಸ್ಪತ್ರೆಯಲ್ಲೇ ನಿಗದಿತ ರೋಗಿಗಳಿಗೆ ಅಷ್ಟೇ ಔಷಧ ಕೊಡಬೇಕು ಅಂದರು.
ಇನ್ನು, ಇವೆಲ್ಲದರ ನಡುವೆ ಹಲವರು ಮನೆಯಲ್ಲಿ ತಮಗೆ ತಾವೇ ಮೆಡಿಕೇಷನ್ ಪಡೆಯುವುದು ಇದೆ. ಅದರಲ್ಲಿ ಮುಖ್ಯವಾದದ್ದು ಸ್ಟೀಮ್ ತೆಗೆದುಕೊಳ್ಳುವುದು. ಇದು ಕೂಡ ಅಪಾಯ ತಂದೊಡ್ಡಬಹುದು ಅಂತಾರೆ ಡಾ ಹಿಮಲ್ದೇವ್.
ವೈರಸ್ ಇಲ್ಲದೇ ಇದ್ದಾಗ ಸ್ಟೀಮ್ ತೆಗೆದುಕೊಳ್ಳುವ ಅಗತ್ಯವಿಲ್ಲ: ಅತಿಯಾದ ಸ್ಟೀಮ್ ಬಳಕೆ ಬ್ಲ್ಯಾಕ್ ಫಂಗಸ್ಗೆ ದಾರಿ ಮಾಡಿಕೊಡುತ್ತೆ. ಹೀಗಾಗಿ, ದಿನದಲ್ಲಿ 2-3 ಬಾರಿ ಸ್ಟೀಮ್ ತೆಗೆದುಕೊಳ್ಳುವುದು ಉತ್ತಮ. ಅದು ಕೂಡ ಮೂಗು ಕಟ್ಟಿದ್ದರೆ, ಸೋಂಕು ತಗುಲಿದ ಸಂದರ್ಭದಲ್ಲಿ ಯಾವ ಸಮಸ್ಯೆಯೂ ಇಲ್ಲ. ವೈರಸ್ ಇಲ್ಲದೇ ಇದ್ದಾಗ ಸ್ಟೀಮ್ ತೆಗೆದುಕೊಳ್ಳುವ ಅಗತ್ಯವಿಲ್ಲ ಅಂದರು.
ವೈದ್ಯರ ಸಲಹೆ ಇದ್ದರೆ ಅಷ್ಟೇ ಸ್ಟೀಮ್ ತೆಗೆದುಕೊಂಡ್ರೆ ಒಳ್ಳೆಯದು. ಇನ್ನು, ಕೊರೊನಾ ಅಂತ ಆಸ್ಪತ್ರೆಗೆ ಹೋಗುವುದು ಕಷ್ಟ. ಆದರೆ, ಮನೆಯಲ್ಲಿಯೇ ಟೆಲಿ ಮೆಡಿಸನ್ ಉಪಯೋಗ ಪಡೆದುಕೊಳ್ಳಬಹುದು ಅಂತ ಸಲಹೆ ನೀಡಿದ ಅವರು, ಜನರು ಔಷಧವನ್ನ ಕೊಂಡುಕೊಳ್ಳುವಾಗ, ಮೆಡಿಕಲ್ ಸ್ಟೋರ್‌ನಲ್ಲಿ ವೈದ್ಯರ ಪಾತ್ರವಿಲ್ಲದೇ ಕೊಡಬಾರದು. ಮೊದಲು ಇದು ನಿಲ್ಲಬೇಕು ಅಂತ ಮನವಿ ಮಾಡಿದರು.
ಓದಿ:ಲಾಕ್ಡೌನ್ ವಿಸ್ತರಣೆ : ತಜ್ಞರ ವರದಿ ಆಧರಿಸಿ ಕ್ರಮ ಎಂದ ಸಚಿವ ಆರ್. ಅಶೋಕ್