ಬೆಂಗಳೂರು: ಸೇನೆಯಲ್ಲಿ ನರ್ಸಿಂಗ್ ಸೇವೆಗೆ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಿದ್ದ ಭಾರತೀಯ ಮಿಲಟರಿ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ 1943ರ ಸೆಕ್ಷನ್ 6 ರಲ್ಲಿದ್ದ 'ಮಹಿಳೆಯಾಗಿದ್ದರೆ' ಎಂಬ ಪದವನ್ನು ಅಸಾಂವಿಧಾನಿಕ ಎಂದು ಹೈಕೊರ್ಟ್ ಘೋಷಣೆ ಮಾಡಿದೆ. ಈ ರೀತಿಯ ಮೀಸಲಾತಿ ನೀಡುವುದು ಸಂವಿಧಾನದ ಪರಿಚ್ಛೇದ 14(ಸಮಾನತೆ), 16(2)(ಲಿಂಗ ತಾರತಮ್ಯ) ಹಾಗೂ 21(ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದಂತಾಗಲಿದೆ ಎಂದು ಧಾರವಾಡ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟು, 81 ವರ್ಷಗಳ ಹಳೆಯ ಕಾನೂನನ್ನು ರದ್ದುಗೊಳಿಸಿ ಆದೇಶಿಸಿದೆ.
ಹುಬ್ಬಳ್ಳಿಯ ಕೆಎಲ್‌ಇ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜಯ್ ಎಂ ಪೀರಾಪುರ, ಕರ್ನಾಟಕ ಶುಶ್ರೂಷಕರ ಸಂಘ ಮತ್ತಿತರರು ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಧಾರವಾಡದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಸಂವಿಧಾನದ ಅಡಿಯಲ್ಲಿ ಮಹಿಳೆಯನ್ನು ಪ್ರತ್ಯೇಕ ವರ್ಗವೆಂದು ಹೇಳಿರುವುದು ನ್ಯಾಯಸಮ್ಮತವಾಗಿದೆ. ಆದರೆ, ಈ ಆಶಯವನ್ನು ಈಡೇರಿಸುವುದಕ್ಕಾಗಿ ತಾರ್ಕಿಕವಲ್ಲದ ರೀತಿಯಲ್ಲಿ ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡಬೇಕು ಎಂದಾಗುವುದಿಲ್ಲ ಮತ್ತು ಪರಿಚ್ಛೇದ 15(3)(ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸೌಲಭ್ಯ ನೀಡುವ ಅವಕಾಶ)ರ ಅಡಿಯಲ್ಲಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು1943ರಲ್ಲಿ ಸುಗ್ರೀವಾಜ್ಞೆಯನ್ನು ಜಾರಿ ಮಾಡಿದ್ದರು. ಅದನ್ನು ಸಂವಿಧಾನದ ಅಡಿಯಲ್ಲಿ ಅಳವಡಿಸಿಕೊಂಡು ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಆದರೆ, ಈ ಕಾನೂನು ಸಂವಿಧಾನದ 33ನೇ ಪರಿಚ್ಛೇದದಂತೆ ಸಂಸತ್ತು ಜಾರಿಗೆ ತಂದಿರುವ ಕಾನೂನನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಸ್ವಾಂತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಸೇನೆಗೆ ಸೇರಲು ಹಿಂಜರಿಯುತ್ತಿದ್ದರು. ಆದ ಕಾರಣ ಮಹಿಳೆಯನ್ನು ಪ್ರೋತ್ಸಾಹಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ, 1943ರಲ್ಲಿ ಇದ್ದಂತಹ ಪರಿಸ್ಥಿತಿ ಪ್ರಸ್ತುತ ಇಲ್ಲ. ಈ ಸುಗ್ರೀವಾಜ್ಞೆ ಜಾರಿಯಾಗಿ 8 ದಶಕಗಳು ಕಳೆದಿವೆ. ಆದರೂ ಇಂದಿಗೂ ಮೀಸಲಾತಿ ಒದಗಿಸುವ ಉದ್ದೇಶಗಳು ಏನು ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಆದ್ದರಿಂದ ಈ ಮೀಸಲು ಸೌಲಭ್ಯ ಸಮರ್ಥನೆಗೆ ಅರ್ಹವಿಲ್ಲ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.