ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರ ನಿರ್ಧಾರಕ್ಕೆ ಬಿಡಲು ಕಾಂಗ್ರೆಸ್ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು. ಎಐಸಿಸಿಯಿಂದ ವೀಕ್ಷಕರಾಗಿ ಸುಶೀಲ್ ಕುಮಾರ್ ಸಿಂಧೆ, ಜಿತೇಂದ್ರ ಸಿಂಗ್, ದೀಪಕ್ ಬಬಾರಿಯಾ ಆಗಮಿಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಶಾಸಕರು ಒಮ್ಮತದಿಂದ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಣಯಗಳು : ರಾಜ್ಯದ ಆರೂವರೆ ಕೋಟಿ ಕನ್ನಡಿಗರು ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಪಕ್ಷಕ್ಕೆ ನೀಡಿರುವ ಪ್ರಚಂಡ ಬಹುಮತಕ್ಕೆ ಪಕ್ಷವು ಮೊದಲ ಶಾಸಕಾಂಗ ಪಕ್ಷ ಸಭೆಯಲ್ಲಿ ಹೃತ್ಪೂರ್ವಕ ಧನ್ಯವಾದಗಳು ತಿಳಿಸುತ್ತದೆ. ಕರ್ನಾಟಕ ರಾಜ್ಯಕ್ಕೆ ಸಿಕ್ಕಿರುವ ಈ ಗೆಲುವು ಸ್ವಾಭಿಮಾನ ಹಾಗೂ ಬ್ರಾಂಡ್ ಕರ್ನಾಟಕದ ಮರುಸ್ಥಾಪನೆಯ ಸೌಹಾರ್ದತೆಗೆ ಸಿಕ್ಕಿರುವ ಜಯವಾಗಿದೆ. ಭಗವಾನ್ ಬಸವಣ್ಣನವರಿಂದ ಅಕ್ಕಮಹಾದೇವಿ ಅವರವರೆಗೆ, ಕನಕದಾಸರು, ಮಹರ್ಷಿ ವಾಲ್ಮೀಕಿಗಳು, ಶ್ರೀ ನಾರಾಯಣ ಗುರುಗಳು, ಸಂತ ಸೇವಾಲಾಲರು, ಶಿಶುನಾಳ ಶರೀಫರು, ಕೆಂಪೇಗೌಡರು, ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಕುವೆಂಪುರವರವರೆಗೂ ಇತರೆ ಎಲ್ಲ ಮಹನೀಯರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ, ಸಮಾಜ ಸುಧಾರಣೆ, ಪಾರದರ್ಶಕ ಹಾಗೂ ದಕ್ಷ ಆಡಳಿತವನ್ನು ನಡೆಸಿಕೊಂಡು ಬರಲಾಗಿದೆ.
2023ರ ಮೇ 13ರಂದು ಪ್ರಕಟವಾಗಿರುವ ಐತಿಹಾಸಿಕ ಫಲಿತಾಂಶದಲ್ಲಿ ರಾಜ್ಯದ ಒಳಗೆ ಹಾಗೂ ಹೊರಗೆ ದ್ವೇಷ ಹಾಗೂ ವಿಭಜನೆ ರಾಜಕೀಯದಿಂದಾಗಿ ಅಪಾಯದಲ್ಲಿ ಸಿಲುಕಿರುವ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗೆ ಮತ್ತೊಮ್ಮೆ ಕರ್ನಾಟಕ ಮತ್ತೊಮ್ಮೆ ಶಕ್ತಿ ತುಂಬಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷವು ಒಕ್ಕೊರಲಿನಿಂದ ಪಕ್ಷಕ್ಕೆ ಆಧಾರ ಸ್ತಂಭವಾಗಿ ಮಾರ್ಗದರ್ಶನ ನೀಡುತ್ತಿರುವ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿತು. ಜೊತೆಗೆ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಅವಿರಥವಾಗಿ ಪ್ರಚಾರ ಮಾಡುತ್ತಾ, ಸೂಕ್ತ ತಂತ್ರಗಾರಿಕೆ ಹಾಗೂ ಮಾರ್ಗದರ್ಶನಗಳನ್ನು ನೀಡಿಕೊಂಡು ಬಂದಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ತಿಳಿಸಿತು. ಈ ಬಾರಿ ಚುನಾವಣೆಯಲ್ಲಿ ನಿರಂತರವಾಗಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಾ ರಾಜ್ಯದ ಜನರಿಗೆ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಿ ಚುನಾವಣೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀಯುತ ರಾಹುಲ್ ಗಾಂಧಿ ಅವರಿಗೂ ಧನ್ಯವಾದ ತಿಳಿಸಲಾಯಿತು.
2022ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೋ ಯಾತ್ರೆ ಕರ್ನಾಟಕ ರಾಜ್ಯದಲ್ಲಿ 21 ದಿನಗಳ ಕಾಲ 600 ಕಿಲೋಮೀಟರ್ ದೂರದಷ್ಟು ಪಾದಯಾತ್ರೆ ಮಾಡಲಾಗಿತ್ತು.ಈ ಮೂಲಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಅಕ್ರಮಗಳ ಬಗ್ಗೆ ಜನರಿಗೆ ತಲುಪಿಸಿ ಚುನಾವಣಾ ಪ್ರಚಾರವನ್ನು ಆರಂಭಿಸಲಾಗಿತ್ತು.