ಕರ್ನಾಟಕ

karnataka

ETV Bharat / state

ಮತದಾರರಿಗೆ ಹಂಚಲು ತಂದಿದ್ದ 1ಕೋಟಿ 47 ಲಕ್ಷ ಮೌಲ್ಯದ ಚಿನ್ನ ಲೇಪಿತ ಆಭರಣ ಜಪ್ತಿ

ರಾಜ್ಯದ ವಿವಿಧೆಡೆಯಲ್ಲಿ ಪೊಲೀಸರು ಅಕ್ರಮ ಹಣ ಮತ್ತು ವಸ್ತುಗಳನ್ನು ದಾಖಲೆ ಇಲ್ಲದ ಕಾರಣ ವಶ ಪಡಿಸಿಕೊಂಡಿದ್ದಾರೆ.

By

Published : Apr 4, 2023, 2:30 PM IST

Gold Plated Jewellery
ಚಿನ್ನ ಲೇಪಿತ ಆಭರಣಗಳು ಜಪ್ತಿ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಚಿನ್ನ ಲೇಪಿತ 1 ಕೋಟಿ 47 ಲಕ್ಷ ರೂ ಮೌಲ್ಯದ ಆಭರಣಗಳನ್ನು ಹಲಸೂರು ಠಾಣಾ ಪೊಲೀಸರು ಜಪ್ತಿ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ‌. ಪಂಕಜ್ ಗೌಡ, ಭಗವಾನ್ ಸಿಂಗ್ ಹಾಗೂ ವಡಿವೇಲು ಬಂಧಿತ ಆರೋಪಿಗಳು. ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಂಚಲು ತಂದಿದ್ದ ಆಭರಣಗಳ ಬಗ್ಗೆ ಚುನಾವಣಾಧಿಕಾರಿ ಮುನಿಯ ನಾಯಕ ಹಲಸೂರು ಠಾಣೆಗೆ ದೂರು ನೀಡಿದ್ದರು.

ಆ ಮೇರೆಗೆ ನಿನ್ನೆ ಸಂಜೆ ದಾಳಿ ನಡೆಸಿದ ಎಸಿಪಿ ರಾಮಚಂದ್ರ, ಇನ್ಸ್‌ಪೆಕ್ಟರ್ ಹರೀಶ್ ಬಾಬು ಹಾಗೂ ಸಬ್ ಇನ್ಸ್‌ಪೆಕ್ಟರ್ ಮಧುರನ್ನೊಳಗೊಂಡ ತಂಡ 8.50ಗ್ರಾಂ ತೂಕದ ಗೋಲ್ಡ್ ಕೋಟೆಡ್ ಸರ, ಉಂಗುರ, ಕಿವಿಯೋಲೆ, ಬ್ರೇಸ್ ಲೇಟ್, ಬಳೆಗಳು ಸೇರಿದಂತೆ 1 ಕೋಟಿ 47 ಲಕ್ಷ ಮೌಲ್ಯದ ಚಿನ್ನಲೇಪಿತ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಹಣ

ದಾಖಲೆ ರಹಿತ ಐದು ಲಕ್ಷ ರೂ ಬನಶಂಕರಿ ಪೊಲೀಸರಿಂದ ಜಪ್ತಿ:ಚುನಾವಣೆ ಸಂದರ್ಭದಲ್ಲಿ ಭರ್ಜರಿ ಕಾಂಚಾಣ ಸದ್ದು ಮಾಡಲಾರಂಭಿಸಿದೆ. ಸೂಕ್ತ ದಾಖಲೆಗಳಿಲ್ಲದೇ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಶಿವಕುಮಾರ್ ಹಾಗೂ ಸಂದೀಪ್ ಎಂಬುವವರನ್ನು ಭಾನುವಾರ ರಾತ್ರಿ ಬನಶಂಕರಿಯ ಯಾರಬ್ ನಗರ ಚೆಕ್ ಪೋಸ್ಟ್​ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, 5.33 ಲಕ್ಷ ರೂ ಹಣ ಜಪ್ತಿ ಮಾಡಿದ್ದಾರೆ.

ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳನ್ನು ಯಾರಬ್ ನಗರದ ತಾತ್ಕಾಲಿಕ ತಪಾಸಣಾ ಕೇಂದ್ರದಲ್ಲಿದ್ದ ಪೊಲೀಸರು ತಡೆದು ಪರಿಶೀಲಿಸಿದಾಗ ಕಾರಿನಲ್ಲಿದ್ದ ಕಂದು ಬಣ್ಣದ ಬ್ಯಾಗ್ ನಲ್ಲಿ ಹಣ ಪತ್ತೆಯಾಗಿದೆ. ಹಣ ಸಹಿತ ಇಬ್ಬರೂ ಆರೋಪಿಗಳನ್ನು ಬಂಧಿಸಿದ ಬನಶಂಕರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಠಾಣಾ ಜಾಮೀನಿನ ಆಧಾರದಲ್ಲಿ ಇಬ್ಬರನ್ನೂ ಬಿಡುಗಡೆಗೊಳಿಸಿದ್ದಾರೆ.

ಅಕ್ರಮ ವಸ್ತುಗಳು

ಶಿವಮೊಗ್ಗದಲ್ಲಿ ದಾಖಲೆ ಇಲ್ಲದ 21 ಲಕ್ಷ ಮೌಲ್ಯದ ವಸ್ತುಗಳು ವಶ:ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾ ಚೆಕ್ ಪೊಸ್ಟ್ ಸುಮಾರು 21.78 ಲಕ್ಷ ರೂ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮೊದಲನೇ ಲಾರಿಯಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 2.30 ಲಕ್ಷ ಮೌಲ್ಯದ ಬಟ್ಟೆ ಸೇರಿದಂತೆ ಗೃಹ ಉಪಯೋಗಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡನೇ ಲಾರಿಯಲ್ಲಿ ಪರಿಶೀಲಿಸಿದಾಗ ಅಂದಾಜು 80 ಸಾವಿರ ರೂ. ಮೌಲ್ಯದ 80 ಬ್ಯಾಗ್​ನಲ್ಲಿದ್ದ 24 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

ದಾಖಲೆ ಇಲ್ಲದ ಅಕ್ಕಿ

ಅದೇ ರೀತಿ ಲಗೇಜ್ ವಾಹನ ಪರಿಶೀಲನೆ ವೇಳೆ 1 ಲಕ್ಷ ಮೌಲ್ಯದ ಕಾಫಿ ಮತ್ತು ಟೀ ಪುಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡನೇ ಲಗೇಜ್ ವಾಹನದಲ್ಲಿ ಅಂದಾಜು 1.30 ಲಕ್ಷ ಮೌಲ್ಯದ ಹಾರ್ಡ್ ವೇರ್ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊಂದು ಲಗೇಜ್ ವಾಹನ ಪರಿಶೀಲನೆ ವೇಳೆ ಸುಮಾರು 15 ಲಕ್ಷ ಮೌಲ್ಯದ ಬಟ್ಟೆ ಹಾಗೂ ಹಾರ್ಡ್ ವೇರ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಅಂದಾಜು ಮೌಲ್ಯ 21.78 ಲಕ್ಷ ರೂಗಳು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಮನೆ ಮನೆಗೆ ಡಿಡಿ ತಲುಪಿಸುತ್ತಿದ್ದ ಆರೋಪ: ಕೆಜಿಎಫ್ ಬಾಬು ವಿರುದ್ಧ ಎಫ್ಐಆರ್ ದಾಖಲು

ABOUT THE AUTHOR

...view details