ಬೆಂಗಳೂರು:ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣದ ಅಬ್ಬರ ಜೋರಾಗಿದೆ. ಇಲ್ಲಿಯವರೆಗೆ ಜಪ್ತಿ ಮಾಡಿದ ನಗದು, ಮದ್ಯ, ವಸ್ತುಗಳ ಮೌಲ್ಯ 100 ಕೋಟಿ ರೂಪಾಯಿ ಮೀರಿದೆ. ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ 108.78 ಕೋಟಿ ರೂ ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಚುನಾವಣೆ ವೇಳೆ ಈ ಅವಧಿಯಲ್ಲಿ ಜಪ್ತಿ ಮಾಡಲಾದ ಅಕ್ರಮ ನಗದು, ಮದ್ಯ, ವಸ್ತುಗಳ ಮೌಲ್ಯ 20.12 ಕೋಟಿ ರೂ. ಆಗಿತ್ತು.
ಈ ಬಾರಿ ಈಗಾಗಲೇ 100 ಕೋಟಿ ರೂ. ಮೊತ್ತದ ವಸ್ತುಗಳು, ನಗದನ್ನು ವಶಕ್ಕೆ ಪಡೆಯಲಾಗಿದೆ. ಅಂದರೆ ಕಳೆದ ಬಾರಿಗೆ ಹೋಲಿಸಿದರೆ 5.40 ಪಟ್ಟು ಹೆಚ್ಚು. ಒಟ್ಟು ಜಪ್ತಿ ಮಾಡಿದ ನಗದು 37.24 ಕೋಟಿ ರೂ., ಫ್ರೀಬೀಸ್ಗಳ ಮೌಲ್ಯ 15.80 ಕೋಟಿ ರೂ., ಮದ್ಯ 26.68 ಕೋಟಿ ರೂ. ಮೊತ್ತ, ಡ್ರಗ್ಸ್ ಮತ್ತು ಮಾದಕ ವಸ್ತುಗಳ ಮೊತ್ತ 11.54 ಕೋಟಿ ರೂ., ಚಿನ್ನ 14.96 ಕೋಟಿ ರೂ., ಇತರ ಅಮೂಲ್ಯ ವಸ್ತುಗಳು 2.56 ಕೋಟಿ ರೂ. ಆಗಿದೆ.
ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು ರೂ.37.24 ಕೋಟಿ ರೂ. ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 26.68 ಕೋಟಿ ರೂ ಮೌಲ್ಯದ 5,23,987 ಲೀಟರ್ ಮದ್ಯ ವಶಪಡಿಸಿಕೊಂಡಿವೆ. ಈವರೆಗೆ ಒಟ್ಟು 965 ಎಫ್ಐಆರ್ಗಳನ್ನು ದಾಖಲಿಸಿಕೊಳ್ಳಲಾಗಿದೆ.