ಕರ್ನಾಟಕ

karnataka

ETV Bharat / state

SSLC EXAM ನಡೆಸಲು ಹೈಕೋರ್ಟ್​ ಸಮ್ಮತಿ... ಪರೀಕ್ಷೆ ಬೇಡವೆಂದು ಕೂಗಿದ ವಿದ್ಯಾರ್ಥಿ - 10ನೇ ತರಗತಿ ಪರೀಕ್ಷೆ ರದ್ದು

SSLC ಪರೀಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕರ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ಈ ವೇಳೆ ಆನ್​ಲೈನ್​ ಮೂಲಕ ಪಾಲ್ಗೊಂಡಿದ್ದ ವಿದ್ಯಾರ್ಥಿವೋರ್ವ ಪರೀಕ್ಷೆ ಬೇಡವೆಂದು ಕೂಗಾಡಿದ ಘಟನೆ ನಡೆದಿದೆ.

SSLC exam
ಎಸ್​ಎಸ್​ಎಲ್​ಸಿ ಪರೀಕ್ಷೆ

By

Published : Jul 12, 2021, 2:19 PM IST

Updated : Jul 12, 2021, 8:12 PM IST

ಬೆಂಗಳೂರು: ಪಿಯುಸಿ ಪರೀಕ್ಷೆ ರದ್ದುಗೊಳಿಸಿರುವ ರೀತಿಯಲ್ಲೇ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿನ ಪಿಯು ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್​ ಮಾಡಿದಂತೆಯೇ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳನ್ನೂ ತೇರ್ಗಡೆ​ ಮಾಡಬೇಕು ಎಂದು ಕೋರಿ ನಗರದ ಜ್ಞಾನಮಂದಿರ ಟ್ರಸ್ಟ್​ನ ಎಸ್.ವಿ.ಸಿಂಗ್ರೇಗೌಡ ಅವರು ಈ ಪಿಐಎಲ್​ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಹಾಗೂ ನ್ಯಾ. ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಪ್ರಭುಲಿಂಗ ನಾವದಗಿ ಅವರು ಪೀಠಕ್ಕೆ ಮಾಹಿತಿ ನೀಡಿ, ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನು ಜುಲೈ 19 ಹಾಗೂ 22ರಂದು ದಿನಕ್ಕೆ ಮೂರು ಸಬ್ಜೆಕ್ಟ್ ಗಳಂತೆ 2 ದಿನಗಳ ಕಾಲ ನಡೆಸಲು ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಪರೀಕ್ಷೆಗಳನ್ನು ನಡೆಸಲು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಕೋವಿಡ್ ಸೋಂಕು ಕೂಡ ಇಳಿಮುಖವಾಗಿದ್ದು, ಪರೀಕ್ಷೆ ನಡೆಸಲು ಯಾವುದೇ ಸಮಸ್ಯೆಗಳಿಲ್ಲ ಎಂದು ವಿವರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳು ಸೋಂಕಿನ ಅಪಾಯಕ್ಕೆ ಸಿಲುಕಲಿದ್ದಾರೆ. ಜತೆಗೆ ಪೋಷಕರಿಗೂ ಸಮಸ್ಯೆಯಾಗಲಿದೆ ಎಂದರು. ಅರ್ಜಿದಾರರ ವಾದ ಪರಿಗಣಿಸದ ಪೀಠ, ಕೋವಿಡ್ ಇಳಿಮುಖವಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ವಿದ್ಯಾರ್ಥಿಗಳ ಪರೀಕ್ಷೆ ಬರೆಯಲು ಸಮಸ್ಯೆಯಾಗದು. ಇನ್ನು ಪರೀಕ್ಷೆ ಬರೆಯಲು ಹಾಜರಾಗುವುದು ರಿಸ್ಕ್ ಎಂದುಕೊಳ್ಳುವ ವಿದ್ಯಾರ್ಥಿಗಳಿಗೆ ಪೋಷಕರಿಗೆ ಪರೀಕ್ಷೆಗೆ ಹಾಜರಾಗುವಂತೆ ಒತ್ತಾಯಿಸುತ್ತಿಲ್ಲ. ಹೀಗಾಗಿ ಪರೀಕ್ಷೆ ನಡೆಸದಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿತು.

ಪರೀಕ್ಷೆ ಬೇಡವೆಂದು ಕೂಗಿದ ವಿದ್ಯಾರ್ಥಿ : ವಿಚಾರಣೆ ವೇಳೆ ಆನ್ ಲೈನ್ ಕಲಾಪಕ್ಕೆ ಹಾಜರಾಗಿದ್ದ ವಿದ್ಯಾರ್ಥಿಯೋರ್ವ ನಮಗೆ ಪರೀಕ್ಷೆ ಬೇಡ ಎಂದು ಕೂಗಿದ. ಇದಕ್ಕೆ ಬೇಸರ ವ್ಯಕ್ತಪಡಿಸದ ಪೀಠ, ಕೂಗಾಡುವುದಕ್ಕೆ ಇದು ಮಾರುಕಟ್ಟೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಕೂಗಿದ ವಿದ್ಯಾರ್ಥಿಯನ್ನು ಮ್ಯೂಟ್ ಮಾಡುವಂತೆ ಕೋರ್ಟ್ ಅಧಿಕಾರಿಗೆ ಸೂಚಿಸಿತು.

ಅರ್ಜಿದಾರರ ಕೋರಿಕೆ : ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಕಳೆದ ಫೆ.5 ರಂದು ನೋಟಿಫಿಕೇಷನ್ ಹೊರಡಿಸಿದ್ದು, ಜುಲೈ 19ರಿಂದ 22ರವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಜೂನ್ 28ರಂದು ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಪರೀಕ್ಷೆ ನಡೆಸುವುದನ್ನು ಆಕ್ಷೇಪಿಸಿದ್ದ ಅರ್ಜಿದಾರರು, ಕೋವಿಡ್ ಕಾರಣಕ್ಕಾಗಿ ಕಳೆದ ವರ್ಷ ಸರಿಯಾಗಿ ತರಗತಿಗಳೇ ನಡೆದಿಲ್ಲ. ಅದರಲ್ಲೂ ಇಂಟರ್ನೆಟ್, ಸ್ಮಾರ್ಟ್ ಫೋನ್​ ಇಲ್ಲದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್​ಲೈನ್ ಮೂಲಕವೂ ಪಾಠ ಕೇಳಲು ಸಾಧ್ಯವಾಗಿಲ್ಲ. ಕೋವಿಡ್ ಒಂದು ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಕೋವಿಡ್ 3ನೇ ಅಲೆ ಎದುರಾಗುವ ಸಾಧ್ಯತೆ ಇದ್ದು ಮಕ್ಕಳಿಗೆ ಸೋಂಕು ತಗುಲುವ ಕುರಿತು ತಜ್ಞರು ಹೇಳಿದ್ದಾರೆ.

ಪ್ರಸಕ್ತ ವರ್ಷ ರಿಪೀಟರ್ಸ್ ಸೇರಿದಂತೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಮಕ್ಕಳು ಅಪಾಯಕ್ಕೆ ಸಿಲುಕಲಿದ್ದಾರೆ. ಈಗಾಗಲೇ ಸಿಬಿಎಸ್‌ಸಿ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ಕಾರಣಕ್ಕಾಗಿಯೇ ಪರೀಕ್ಷೆ ರದ್ದುಪಡಿಸಿದೆ. ರಾಜ್ಯದಲ್ಲಿಯೂ ಪಿಯು ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಅದೇ ರೀತಿ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸದಂತೆ ಸರ್ಕಾರ ಹಾಗೂ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು. ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿರುವ ನೋಟಿಫಿಕೇಷನ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Last Updated : Jul 12, 2021, 8:12 PM IST

ABOUT THE AUTHOR

...view details