ಬೆಂಗಳೂರು :ಆಳುವ ಸರ್ಕಾರಗಳಿಂದ ದೇಶದ್ರೋಹ ಕಾನೂನು ದುರ್ಬಳಕೆಯಾಗುತ್ತಿದೆ. ಈ ಕಾನೂನನ್ನು ರದ್ದುಗೊಳಿಸುವ ಅಗತ್ಯವಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ 'ದೇಶದ್ರೋಹ ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವಿನ ಸಂಘರ್ಷ' ವೆಬಿನಾರ್ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ್ರೋಹ ಕಾನೂನಿನ ಅಡಿ ಹತ್ತಿಕ್ಕುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದ ನ್ಯಾ. ನಾಗಮೋಹನ್ ದಾಸ್ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಕಾನೂನು ಬಳಕೆಯಾಗಿದ್ದಕ್ಕಿಂತ ದುರ್ಬಳಕೆಯಾಗಿರುವುದೇ ಹೆಚ್ಚಾಗಿದೆ. ತಮ್ಮ ಮಾತಿಗೆ ಉದಾಹರಣೆ ನೀಡಿದ ನ್ಯಾಯಮೂರ್ತಿಗಳು, ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ 9 ಸಾವಿರ ಮಂದಿ ವಿರುದ್ಧ, ಕೃಷಿ ಕಾಯ್ದೆ ವಿರೋಧಿಸಿದ 3,300 ರೈತರ ವಿರುದ್ಧ, ಕೋವಿಡ್ ನಿರ್ವಹಣೆ ವೈಫಲ್ಯ ಎತ್ತಿ ತೋರಿದ 55 ಪತ್ರಕರ್ತರ ವಿರುದ್ಧ, ಉತ್ತರ ಪ್ರದೇಶದ ಹಾಥ್ ರಸ್‌ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದ 22 ಹೋರಾಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.