ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಶ್ಚಿಮ ವಿಭಾಗದ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ 25 ಚೆಕ್ ಪಾಯಿಂಟ್ ನಿಯೋಜಿಸಲಾಗಿದೆ. ಇಲ್ಲಿಗೆ ಬರುವ ಪ್ರತಿಯೊಂದು ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಅಕ್ರಮವಾಗಿ ಮದ್ಯ, ಹಣ ಸೇರಿದಂತೆ ಇನ್ನಿತರೆ ವಸ್ತುಗಳ ಸಾಗಟ ಮಾಡುವುದು ಕಂಡು ಬಂದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲು ಕ್ರಮ ಕೈಗೊಂಡಿದ್ದಾರೆ.
ಇನ್ನು ಶಾಂತಿಯುತವಾಗಿ ಮತದಾನ ನಡೆಯುವಂತೆ ನೋಡಿಕೊಳ್ಳಲು ಪಶ್ಚಿಮ ವಿಭಾಗದ ಐದು ಪೊಲೀಸ್ ಠಾಣೆಗಳು ಹಾಗೂ ಉತ್ತರ ವಿಭಾಗದ 8 ಪೊಲೀಸ್ ಠಾಣೆಗಳ ಪೊಲೀಸರನ್ನು ಹೆಚ್ಚಿನ ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ.
ಹೆಚ್ಚುವರಿಯಾಗಿ ಕೇಂದ್ರಿಯ ಅರಸೇನಾ ಪಡೆಯನ್ನು ಆರ್.ಆರ್. ನಗರಕ್ಕೆ ಕರೆಯಿಸಿಕೊಳ್ಳಲಾಗಿದೆ. ಜೊತೆಗೆ ಕೆಎಸ್ಆರ್ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜ್ಞಾನ ಭಾರತಿ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೇನಾ ಪಡೆ ಪಥಸಂಚಲನ ನಡೆಸಿತು.