ಬೆಂಗಳೂರು:ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸೋಂಕಿತನ ಕುಟುಂಬಸ್ಥರ ಮೇಲೆ ಸೆಕ್ಯುರಿಟಿ ಇನ್ಚಾರ್ಜ್ ಹಾಗೂ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
"ಸರಿಯಾದ ಬೆಡ್, ಆಕ್ಸಿಜನ್ ಬೇಕು ಅಂದರೆ ಕಾಸು ಕೊಡಬೇಕು. ಕೆ.ಸಿ ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ನರಕ ದರ್ಶನ ತೋರಿಸುತ್ತಿದ್ದಾರೆ" ಎಂದು ಸೋಂಕಿತನ ಕುಟುಂಬಸ್ಥರು ದೂರಿದ್ದಾರೆ.
ಅಷ್ಟೇ ಅಲ್ಲದೆ, ಒಬ್ಬ ಸೋಂಕಿತ ವ್ಯಕ್ತಿಯನ್ನು ಎಳೆದುಕೊಂಡು ಹೋದ ವಾರ್ಡ್ ಬಾಯ್ಗಳು ತಮ್ಮ ಕೈಗೆ ನೆತ್ತರು ಸೋರಿದರೂ ಸಿಬ್ಬಂದಿ ಉಡಾಫೆಯ ವರ್ತನೆ ತೋರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಬೆಡ್ಗಾಗಿ 25 ಆಸ್ಪತ್ರೆಗಳಿಗೆ ತಿರುಗಾಡಿ, ಕೊನೆಗೆ ಏ.24ರಂದು ಕೆಸಿ ಜನರಲ್ ಆಸ್ಪತ್ರೆಗೆ ಬಂದ ಸೋಂಕು ರಹಿತ ರೋಗಿ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಲಗ್ಗೆರೆಯ ಸೋಂಕು ರಹಿತ ರೋಗಿಗೆ ಉಸಿರಾಟದ ಸಮಸ್ಯೆಯಾಗಿದ್ದು, 55 ವರ್ಷದ ಮುನಿರಾಜು ಮೃತ ವ್ಯಕ್ತಿಯಾಗಿದ್ದಾನೆ ಎಂಬ ಮಾಹಿತಿ ದೊರೆತಿದೆ.