ಕರ್ನಾಟಕ

karnataka

ETV Bharat / state

ಕೇರಳದಲ್ಲಿ ಸ್ಫೋಟ ಹಿನ್ನೆಲೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕಟ್ಟೆಚ್ಚರ - ಸರಣಿ ಸ್ಫೋಟ

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧೆಡೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

security-beefed-in-many-places-of-karnataka-after-blast-in-kerala-today
ಕೇರಳದಲ್ಲಿ ಸ್ಫೋಟ ಹಿನ್ನೆಲೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕಟ್ಟೆಚ್ಚರ

By ETV Bharat Karnataka Team

Published : Oct 29, 2023, 10:57 PM IST

ಬೆಂಗಳೂರು:ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೇರಿಯಲ್ಲಿನ ಕನ್ವೆನ್ಷನ್ ಸೆಂಟರ್‌ನಲ್ಲಿ ಪ್ರಾರ್ಥನಾ ಸಭೆ ವೇಳೆ ಸಂಭವಿಸಿದ ಸರಣಿ ಸ್ಫೋಟದ ಬೆನ್ನಲ್ಲೇ ನಗರದ ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ನಗರ ಪೊಲೀಸ್ ಆಯಕ್ತ ಬಿ. ದಯಾನಂದ ನಿರ್ದೇಶಿಸಿದ್ದಾರೆ.

ಜೊತೆಗೆ, ಬೆಂಗಳೂರು ಸೇರಿ ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಕೇರಳ ಗಡಿ ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಅವರು ಸೂಚಿಸಿದ್ದಾರೆ. ರಾಜ್ಯ ಪೊಲೀಸ್ ಘಟಕಗಳಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ತಾಕೀತು ಮಾಡಿದೆ. ಹಾಗಾಗಿ ಕರ್ನಾಟಕ, ಉತ್ತರ ಪ್ರದೇಶ, ದೆಹಲಿ ಹಾಗೂ ಮಂಗಳೂರಿನ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಅಲ್ಲದೇ, ರಾಜ್ಯದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ, ಅಲ್ಲಿಗೆ ಆಗಮಿಸುವ ಪ್ರಯಾಣಿಕರು ಮತ್ತು ಅವರ ಲಗೇಜ್ ಬ್ಯಾಗ್‌ಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ, ನಗರದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ವಿಧಾನಸೌಧ, ಹೈಕೋರ್ಟ್‌ಗೂ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದ್ದು, ಗುಪ್ತಚರ ಸಂಸ್ಥೆಗಳೊಂದಿಗೆ ಪೊಲೀಸ್ ಇಲಾಖೆ ನಿರಂತರ ಸಂಪರ್ಕದಲ್ಲಿದೆ. ನಗರದಲ್ಲಿ ಹೊಯ್ಸಳ, ಚೀತಾ ಬೀಟ್ ಸಿಬ್ಬಂದಿಯ ಗಸ್ತು ಹೆಚ್ಚಳ ಮಾಡಲಾಗಿದೆ. ಕೇರಳದ ಪೊಲೀಸ್ ಅಧಿಕಾರಿಗಳು ರಾಜ್ಯ ಮತ್ತು ಕೇಂದ್ರ ಗುಪ್ತಚರ ದಳದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಏನಾಗುತ್ತಿದೆ ಎಂಬುದರ ಕುರಿತು ಪ್ರತಿಯೊಂದು ಮಾಹಿತಿಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಕೇರಳ ಸ್ಫೋಟ: ಸಾವಿನ ಸಂಖ್ಯೆ 2ಕ್ಕೇರಿಕೆ, 52 ಮಂದಿಗೆ ತೀವ್ರ ಗಾಯ, 6 ಜನರ ಸ್ಥಿತಿ ಚಿಂತಾಜನಕ

ಸ್ಫೋಟದಲ್ಲಿ ಇಬ್ಬರು ಸಾವು: ಕಲಮಸ್ಸೆರಿಯಲ್ಲಿನ ಐಇಡಿ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಲ್ಲದೆ, ಕನಿಷ್ಠ 52 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಸಭೆ ನಡೆಯುತ್ತಿದ್ದ ಜಮ್ರಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್​​​ನಲ್ಲಿ ಬೆಳಗ್ಗೆ 9.40 ಕ್ಕೆ ಸ್ಫೋಟ ಸಂಭವಿಸಿತ್ತು. ಗಾಯಗೊಂಡ 52 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 18 ಮಂದಿ ಐಸಿಯುಗಳಲ್ಲಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಿಳಿಸಿದ್ದಾರೆ. 18 ಮಂದಿಯಲ್ಲಿ, 12 ವರ್ಷದ ಮಗು ಸೇರಿದಂತೆ ಆರು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರಲ್ಲಿ ಮೂವರಿಗೆ ಶೇ. 90 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details