ಬೆಂಗಳೂರು: ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ಪಕ್ಷದ ನಾಯಕರು ಪ್ರತಿಭಟನೆ ನಡೆಸಲು ಸೇರಿದ್ದು ನಿಷೇಧಾಜ್ಞೆ ಅಡ್ಡಿಯಾಗಲಿದೆ.
ವಿಧಾನಸೌಧ ಆವರಣದಲ್ಲಿ 'ಕೈ' ನಾಯಕರ ಪ್ರತಿಭಟನೆ ವಿಧಾನಸೌಧದ ಆವರಣದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಹೀಗಾಗಿ ಯಾವುದೇ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಶಕ್ತಿಸೌಧದ ಆವರಣದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನೊಂದೆಡೆ ಬೆಳಗ್ಗೆ 9.30 ರ ಸಮಯಕ್ಕೆ ಕಾಂಗ್ರೆಸ್ ನಾಯಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಪ್ರತಿಭಟನೆ ನಡೆಸದಂತೆ ಪೊಲೀಸರು ಅಂಟಿಸಿರುವ ಪೋಸ್ಟರ್ ಕಂಡು ಅಚ್ಚರಿ ವ್ಯಕ್ತಪಡಿಸಿದರು.
ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕರಾದ ಮಾಜಿ ಡಿಸಿಎಂ ಪರಮೇಶ್ವರ್, ಎಂಎಲ್ಸಿ ಬಿ.ಕೆ. ಹರಿಪ್ರಸಾದ್, ನಾರಾಯಣ್ ಸ್ವಾಮಿ, ಯು.ಬಿ. ವೆಂಕಟೇಶ್ ಮತ್ತಿತರ ನಾಯಕರು ಆಗಮಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದ ನಂತರ ಕಾಂಗ್ರೆಸ್ ಪ್ರತಿಭಟನೆ ಆರಂಭವಾಗಿದ್ದು, ಪ್ರತಿಭಟನೆಗೆ ಜಮೀರ್ ಅಹಮದ್, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ನಾಯಕರು ಕೈಜೋಡಿಸಿದ್ದಾರೆ. ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿರುವ ಕೈ ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ನಿಷೇಧಾಜ್ಞೆ ನಡುವೆ ಪ್ರತಿಭಟನೆ ಮಾಡುತ್ತಿರುವ ಪಕ್ಷದ ನಾಯಕರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.