ಬೆಂಗಳೂರು: ಬಿಸಿಯೂಟ ಯೋಜನೆಯ ಖಾಸಗೀಕರಣ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ನಾಳೆ (ಫೆ.3) ಪ್ರತಿಭಟನೆ ನಡೆಯುವ ಹಿನ್ನೆಲೆ ಸ್ವಾತಂತ್ರ್ಯ ಉದ್ಯಾನ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಕಾರ್ಯಕರ್ತೆಯರು ನಗರದ ಸಿಟಿ ರೈಲು ನಿಲ್ದಾಣದಿಂದ ಉದ್ಯಾನದವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ಗೌರವಾಧ್ಯಕ್ಷೆ ಎಸ್.ವರಲಕ್ಷ್ಮೀ, ಲಕ್ಷ್ಮೀದೇವಿ ಮುಂದಾಳತ್ವ ವಹಿಸಿದ್ದು, ಅರ್ನಿಷ್ಟಾವಧಿ ಹೋರಾಟ ನಡೆಸಲು ಅನುಮತಿಗಾಗಿ ನಗರ ಪೊಲೀಸ್ ಆಯುಕ್ತರಿಗೆ ಕೋರಿದ್ದರು. ನಗರ ಪೊಲೀಸ್ ಆಯುಕ್ತರು ಪಶ್ಚಿಮ ವಿಭಾಗದ ಡಿಸಿಪಿ ಅವರಿಗೆ ಪ್ರತಿಭಟನೆ ನಡೆಸದಂತೆ ತಡೆಯಬೇಕೆಂದು ಆದೇಶಿಸಿದ್ದಾರೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಲಂ 144 ಜಾರಿಗೊಳಿಸಿ, ಆದೇಶ ಉಲ್ಲಂಘಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.