ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಶೇ.74.67ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ, ಯಾದಗಿರಿಗೆ ಕಡೆಯ ಸ್ಥಾನ ಬಂದಿದೆ. ಕಳೆದ ಬಾರಿಗಿಂತ ಈ ಬಾರಿ ಶೇ.12.79 ರಷ್ಟು ಹೆಚ್ಚು ಫಲಿತಾಂಶ ಬಂದಿದೆ.
ಶೇ. 74.67 ರಷ್ಟು ಫಲಿತಾಂಶ: ಸುದ್ದಿಗೋಷ್ಟಿ ನಡೆಸಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಹಾಗು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಅವರು ಫಲಿತಾಂಶ ಪ್ರಕಟಿಸಿದರು. ನಂತರ ಮಾತನಾಡಿದ ರಿತೀಶ್ ಸಿಂಗ್, ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ 7,02,067 ವಿದ್ಯಾರ್ಥಿಗಳಲ್ಲಿ 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 74.67 ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಶೇ. 61.22 ವಾಣಿಜ್ಯ ವಿಭಾಗದಲ್ಲಿ ಶೇ. 75.89 ಹಾಗು ವಿಜ್ಞಾನ ವಿಭಾಗದಲ್ಲಿ ಶೇ.85.71 ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಿದರು.
3,49,901 ಬಾಲಕರು ಪರೀಕ್ಷೆ ಬರೆದಿದ್ದು ಇದರಲ್ಲಿ 2,41,607 ಬಾಲಕರು ತೇರ್ಗಡೆಯಾಗಿದ್ದಾರೆ ಶೇ. 69.05 ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. 3,52,166 ಬಾಲಕಿಯರು ಪರೀಕ್ಷೆ ಬರೆದಿದ್ದು 2,82,602 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಶೇ. 80.25 ರಷ್ಟು ಫಲಿತಾಂಶ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರದ್ದೇ ಮೇಲುಗೈ ಆಗಿದೆ ಎಂದು ಮಾಹಿತಿ ನೀಡಿದರು.
ಟಾಪರ್ಸ್:ಕಲಾ ವಿಭಾಗದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಎನ್ಎಂಕೆಆರ್ವಿ ಕಾಲೇಜಿನ ವಿದ್ಯಾರ್ಥಿನಿ ತಬಸುಮ್ ಶೇಖ್ 593 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನಾನ್ಯ ಕೆ.ಎ 600 ಕ್ಕೆ 600 ಅಂಕ ಪಡೆದುಕೊಂಡು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕೋಲಾರದ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿ ಕೌಶಿಕ್ 600 ಕ್ಕೆ 596 ಅಂಕ ಪಡೆದಿದ್ದು, ಜಯನಗರ ಆರ್ವಿ ಕಾಲೇಜಿನ ಸುರಭಿ ಎಸ್ 596 ಅಂಕ ಇಬ್ಬರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
1,09,509 ವಿದ್ಯಾರ್ಥಿಗಳು ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದರೇ, 2,47,315 ವಿದ್ಯಾರ್ಥಿಗಳು ಶೇ.60, 90,014 ವಿದ್ಯಾರ್ಥಿಗಳು ಶೇ.50, 77,371 ವಿದ್ಯಾರ್ಥಿಗಳು ಶೇ.35 ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಉತ್ತೀರ್ಣ ಹಂತದಲ್ಲಿ ಅನುತ್ತೀರ್ಣ ಆಗಿರುವ 15 ಸಾವಿರ ಮಕ್ಕಳಿಗೆ ಎರಡು ವಿಷಯಗಳಿಗೆ ತಲಾ ಐದು ಅಂಕದ ಗ್ರೇಸ್ ಮಾರ್ಕ್ಸ್ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಪಿಯು ಕಾಲೇಜಿನಲ್ಲಿ 42 ಕಾಲೇಜು ಶೇ.100 ರಷ್ಟು ಫಲಿತಾಂಶ ಪಡೆದಿದ್ದು, ಯಾವುದೇ ಕಾಲೇಜು ಶೂನ್ಯ ಫಲಿತಾಂಶ ಪಡೆದುಕೊಂಡಿಲ್ಲ ಎನ್ನುವ ಮಾಹಿತಿ ನೀಡಿದ್ದು, ಅನುದಾನಿತ ಪಿಯು ಕಾಲೇಜಿನಲ್ಲಿ 10 ಶೇ. 100 ರಷ್ಟು ಫಲಿತಾಂಶ 5 ಶೂನ್ಯ ಫಲಿತಾಂಶ, ಅನುದಾನ ರಹಿತ ಪಿಯು ಕಾಲೇಜಿನಲ್ಲಿ 264 ಕಾಲೇಜು ಶೇ.100 ಫಲಿತಾಂಶ, 73 ಕಾಲೇಜು ಶೂನ್ಯ ಫಲಿತಾಂಶ ಪಡೆದುಕೊಂಡಿವೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ತಬಸುಮ್ ಶೇಖ್ ಪ್ರತಿಕ್ರಿಯೆ : ''ಫಲಿತಾಂಶದಿಂದ ತುಂಬಾ ಖುಷಿ ಆಗುತ್ತಿದೆ. ನನಗೆ ನೆರವಾದ ಎಲ್ಲರಿಗೂ ಧನ್ಯವಾದಗಳು. ಶಿಕ್ಷಕರು, ಪೋಷಕರು ಹಾಗೂ ದೇವರು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಇದೇ ಸಾಧನೆಯನ್ನು ಮುಂದುವರೆಸಲು ಪ್ರಯತ್ನಿಸುತ್ತೇನೆ. ದಿನಾಲೂ 6ರಿಂದ 8 ಗಂಟೆ ಕಾಲ ಓದಿರುವುದು ನನ್ನ ಯಶಸ್ಸಿಗೆ ನೆರವಾಗಿದೆ. ಈ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನೂ ಸಹ ಬಳಸಿಕೊಂಡು ಪರೀಕ್ಷೆ ಹೇಗಿರಲಿದೆ ಎಂಬುದನ್ನು ಅರಿತು ಓದುತ್ತಿದ್ದೆ. ಮುಂದೆ ನಾನು ಸೈಕಾಲಜಿಯಲ್ಲಿ ಡಿಗ್ರಿ ಮಾಡುವ ಇರಾದೆ ಹೊಂದಿದ್ದೇನೆ. ಅದಕ್ಕಾಗಿ ಈಗಾಗಲೇ ಆರ್ವಿ ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಭವಿಷ್ಯದಲ್ಲಿ ಕ್ಲಿನಿಕಲ್ ಸೈಕಾಲಾಜಿಸ್ಟ್ ಆಗಬೇಕೆಂಬ ಗುರಿ ಹೊಂದಿದ್ದೇನೆ. ಅದಕ್ಕೆ ನಾನು ಉನ್ನತ ಶಿಕ್ಷಣ ಪಡೆಯಬೇಕಿದೆ, ನನ್ನ ಮುಂದೆ ದೊಡ್ಡ ಗುರಿಗಳಿವೆ'' ಎಂದು ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಬಸುಮ್ ಶೇಖ್ ಹೇಳಿದ್ದಾರೆ.
ಕಲಾ ವಿಭಾಗದ ಟಾಪರ್ಸ್: