ಬೆಂಗಳೂರು: ಮಾರ್ಚ್ 23 ರಂದು ನಡೆಯಬೇಕಿದ್ದ ಪಿಯು ಇಂಗ್ಲಿಷ್ ಪತ್ರಿಕೆ ಪರೀಕ್ಷೆಯನ್ನು, ಕೊರೊನಾ ವೈರಸ್ನಿಂದಾಗಿ ಮುಂದೂಡಲಾಗಿತ್ತು. ಹೀಗೆ ಮುಂದೂಡಲ್ಪಟ್ಟ ಪರೀಕ್ಷೆ ಇಂದು ಪದವಿಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗೃಹ ಇಲಾಖೆಯ ಸಹಕಾರದೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಗಿದೆ.
ಬೆಳಗ್ಗೆ 10:15ಕ್ಕೆ ಶುರುವಾದ ಪರೀಕ್ಷೆ 1:30ರವರೆಗೆ ನಡೆಯಿತು. ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯವಾಗಿತ್ತು. ಕೇಂದ್ರದ ಹೊರಗಡೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಹ್ಯಾಂಡ್ ಸ್ಯಾನಿಟೈಸ್ ಮಾಡಲಾಯಿತು. ನಂತರ ಮಾಸ್ಕ್ ಇಲ್ಲದವರಿಗೆ ಕೇಂದ್ರದಲ್ಲೇ ಮಾಸ್ಕ್ ನೀಡಿ ಪರೀಕ್ಷೆಗೆ ಕಳುಹಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ಗಳನ್ನ ಹಾಕಲಾಗಿತ್ತು. ಜೊತೆಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾ ಮೇಲ್ವಿಚಾರಕರು ಸಹ ಮಾಸ್ಕ್ ಧರಿಸಿ, ಕೈಗಳಿಗೆ ಗ್ಲೌಸ್ ಧರಿಸಿ ಕೆಲಸ ನಿರ್ವಹಿಸಿದರು.
ಒಟ್ಟು 1016 ಕೇಂದ್ರಗಳಲ್ಲಿ ಪರೀಕ್ಷೆಗೆ 5,95,997 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ ಹೊಸಬರು 5,40,484, ಖಾಸಗಿ ವಿದ್ಯಾರ್ಥಿಗಳು 27,120, ಪುನರಾವರ್ತಿತ ವಿದ್ಯಾರ್ಥಿಗಳು 28,393 ಪರೀಕ್ಷೆ ಬರೆದರು. ಜಿಲ್ಲೆಯಿಂದ ಜಿಲ್ಲೆಗೆ ಪರೀಕ್ಷಾ ಕೇಂದ್ರಗಳನ್ನ ಸುಮಾರು 18,529 ವಿದ್ಯಾರ್ಥಿಗಳು ಬದಲಾಯಿಸಿಕೊಂಡಿದ್ದರು. 1889 ವಿದ್ಯಾರ್ಥಿಗಳು ಹೊರ ರಾಜ್ಯಗಳಿಂದ ಬಂದವರಾಗಿದ್ದು, 650 ಪರೀಕ್ಷಾ ಕೇಂದ್ರಗಳ ಬದಲಾವಣೆಯನ್ನ ಮಾಡಲಾಗಿತ್ತು. ಕೊರೊನಾ ಹಿನ್ನೆಲೆ ಹೆಚ್ಚುವರಿ 13,528 ಕೊಠಡಿ ಸಿದ್ಧಪಡಿಸಲಾಗಿತ್ತು. ರಾಜ್ಯಾದ್ಯಂತ 36,592 ಕೊಠಡಿಗಳನ್ನ ಪರೀಕ್ಷೆಗೆ ಬಳಸಲಾಯ್ತು.