ಬೆಂಗಳೂರು: ಕುಟುಂಬ ಪಿಂಚಣಿಯಂತ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಎರಡನೇ ಪತ್ನಿಯ ಸಂಬಂಧವನ್ನು ಗುರುತಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕ. ಈ ಪ್ರಕ್ರಿಯೆ ಸರ್ಕಾರಿ ಉದ್ಯೋಗಿಗಳಿಗೆ ಎರಡನೇ ಮದುವೆಗೆ ಒಪ್ಪಿಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಪಡೆಯುವ ಅಧಿಕಾರ ಹೊಂದಿದೆ ಎಂದು ತಿಳಿಸಿದೆ.
ಪತಿಯ ಕುಟುಂಬ ಪಿಂಚಣಿ ನೀಡಲು ನಿರಾಕರಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ, ಮೊದಲನೇ ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹಾಗಾಗಿ ಎರಡನೇ ಪತ್ನಿಗೆ ಪಿಂಚಣಿಯ ಹಕ್ಕಿಲ್ಲ ಎಂದು ತಿಳಿಸಿದೆ. ಕೌಟುಂಬಿಕ ಪಿಂಚಣಿಯನ್ನು ನಿಯಮದ ಪ್ರಕಾರ ಪತ್ನಿಗೆ ನೀಡಲಾಗುವುದು. ಆದರೆ ಎರಡನೇ ಪತ್ನಿಯ ಮದುವೆ ಕಾನೂನಿನ ಕಣ್ಣಲ್ಲಿ ಮದುವೆಯೇ ಅಲ್ಲ. ಹಾಗಾಗಿ ಹಿಂದೂ ವಿವಾಹ ಕಾಯಿದೆ 1955ರ ಪ್ರಕಾರ ದ್ವಿಪತ್ನಿತ್ವ ಅಪರಾಧವಾಗುತ್ತದೆ ಎಂದಿರುವ ವಿಭಾಗೀಯಪೀಠ, ಏಕ ಸದಸ್ಯಪೀಠದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿ, ಅರ್ಜಿದಾರರು ಕಾನೂನು ಬದ್ಧವಾಗಿ ಮದುವೆಯಾದ ಪತ್ನಿಯಲ್ಲ, ಹಾಗಾಗಿ ಪಿಂಚಣಿ ನೀಡಲಾಗದು ಎಂದು ಆದೇಶ ನೀಡಿದೆ.
ಹಿಂದೂ ಧರ್ಮದಲ್ಲಿ ಏಕಪತ್ನಿತ್ವ ಚಾಲ್ತಿಯಲ್ಲಿದೆ. ಮೊದಲನೇ ಪತ್ನಿ ಜೀವಂತವಾಗಿರಬೇಕಾದರೆ ಎರಡನೇ ಮದುವೆಗೆ ಅವಕಾಶವೇ ಇಲ್ಲ. ಹಾಗಾಗಿ ಅರ್ಜಿದಾರರು ಏನೇ ವಾದ ಮಾಡಿದರೂ ಅದಕ್ಕೆ ಯಾವುದೇ ಕಾಯಿದೆಯ ಬೆಂಬಲ ಇರುವುದಿಲ್ಲ. ಅವರಿಗೆ ಪಿಂಚಣಿಯ ಅರ್ಹತೆ ಇರುವುದಿಲ್ಲ. ಹಾಗಾಗಿ ಮೃತ ಸರ್ಕಾರಿ ನೌಕರರ ಜತೆಗೆ ಅರ್ಜಿದಾರರ ನಡುವೆ ಏರ್ಪಟ್ಟಿರುವ ಎರಡನೇ ಮದುವೆಗೆ ಕಾನೂನು ಬಾಹಿರವಾಗಿದ್ದು, ಅದಕ್ಕೆ ಯಾವುದೇ ಸಿಂಧುತ್ವವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.