ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಬರೆಯಬೇಕಿದ್ದ ಸುಮಾರು 76 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಪರೀಕ್ಷೆ ಇಲ್ಲದೆಯೇ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆಯೇ ಪುನರಾವರ್ತಿತ ವಿದ್ಯಾರ್ಥಿಗಳನ್ನೂ ಪಾಸು ಮಾಡಬೇಕು ಎಂದು ಕೋರಿ ನಗರದ ಜ್ಞಾನಮಂದಿರ ಟ್ರಸ್ಟ್ ನ ಎಸ್.ವಿ.ಸಿಂಗ್ರೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.
ಇಂದು ನಡೆದ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪ್ರಸಕ್ತ ಸಾಲಿನ ಪಿಯು ವಿದ್ಯಾರ್ಥಿಗಳ ಜತೆಗೆ ಪುನರಾವರ್ತಿತ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಶೇ 35ರಷ್ಟು ಅಂಕಗಳನ್ನು ನೀಡಿ ಉತ್ತೀರ್ಣಗೊಳಿಸಲಾಗುವುದು. ಇನ್ನುಳಿದಂತೆ 17,477 ಖಾಸಗಿ ವಿದ್ಯಾರ್ಥಿಗಳು ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳನ್ನು ಅವರ ಎಸ್ಎಸ್ಎಲ್ ಸಿ ಅಂಕಗಳನ್ನು ಶೇ 45 ರಂತೆ ಪ್ರಥಮ ಪಿಯು ನಲ್ಲಿ ಗಳಿಸಿದ್ದ ಅಂಕಗಳನ್ನು ಶೇ 45ರಂತೆ ಹಾಗೂ ದ್ವಿತೀಯ ಪಿಯು ಇಂಟರ್ನಲ್ ಅಸೆಸ್ಮೆಂಟ್ ಗೆ ಶೇ 10ರಂತೆ ಅಂಕಗಳನ್ನು ಪರಿಗಣಿಸಿ ಪಾಸ್ ಮಾಡಲಾಗುವುದು. ಜುಲೈ 31ರ ಒಳಗೆ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಹೈಕೋರ್ಟ್ ಗೆ ಲಿಖಿತ ಮಾಹಿತಿ ಸಲ್ಲಿಸಿದರು.