ಬೆಂಗಳೂರು:ಕೊರೊನಾ ನಂತರ ಪ್ರಪಂಚದಾದ್ಯಂತ ಹಲವು ಬದಲಾವಣೆಗಳು ಕಂಡು ಬರುತ್ತಿದ್ದು, ಸಾಂಕ್ರಾಮಿಕ ಸಮಯದಲ್ಲಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಕೊರೊನಾ ಗಾಳಿ ಅಥವಾ ಇತರ ಮೂಲಗಳಿಂದ ತಗುಲಬಹುದು ಎಂಬ ಕಾರಣಕ್ಕೆ, ಸಾರ್ವಜನಿಕ ಸಾರಿಗೆಯಿಂದ ಜನರು ದೂರ ಉಳಿಯುತ್ತಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಕೆಲವು ತಿಂಗಳುಗಳಲ್ಲಿ, ಹಳೆಯ ಕಾರುಗಳ ಖರೀದಿಯೂ ಹೆಚ್ಚಾಗಿದೆ. ಸುರಕ್ಷತೆ ಹಾಗೂ ಹಣ ಉಳಿತಾಯಕ್ಕಾಗಿ, ತಮ್ಮ ಅನುಕೂಲಕ್ಕೆ ಬೇಕಾದಂತೆ ಸೆಕೆಂಡ್ ಹ್ಯಾಂಡ್ ಕಾರುಗಳತ್ತ ಜನರು ಮುಖಮಾಡುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ 1 ರಿಂದ 5 ಲಕ್ಷ ರೂ.ವರೆಗಿನ ಹಳೆ ಕಾರುಗಳ ಖರೀದಿ ಜೋರಾಗಿದ್ದು, ಹೊಸ ಕಾರುಗಳನ್ನು ಖರೀದಿಸುವ ಮನಸ್ಸಿದ್ದ ಗ್ರಾಹಕರು ಕೂಡ, ಮಿತವ್ಯಯ ದೃಷ್ಟಿಯಿಂದ ತಮ್ಮ ಆರ್ಥಿಕತೆಗೆ ಹೊಂದುವ ಹಳೆ ಕಾರುಗಳನ್ನು ಖರೀದಿಸುತ್ತಿದ್ದಾರೆ. ಮೊದಲು ಪ್ರತಿ ತಿಂಗಳು 10 ರಿಂದ 15 ಕಾರುಗಳು ಮಾತ್ರ ಮಾರಾಟವಾಗುತ್ತಿದ್ದವು. ಈಗ 25 ರಿಂದ 30 ಕಾರುಗಳು ಬಿಕರಿ ಆಗುತ್ತಿವೆ.
ಇನ್ನು ಮಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷದಿಂದ ನಾಲ್ಕು ಲಕ್ಷದ ಬೆಲೆಯ, ಹಳೆ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಮೊದಲು ಶೇ.25 ರಷ್ಟು ಮಾರಾಟವಾಗುತ್ತಿದ್ದ ಕಾರುಗಳು, ಇದೀಗ ತಿಂಗಳಿಗೆ ಶೇ. 35 ರಷ್ಟು ಮಾರಾಟವಾಗುತ್ತಿದೆ.