ಬೆಂಗಳೂರು:ರಾಜ್ಯ ಕಾಂಗ್ರೆಸ್ ನಾಯಕರು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕನಸಿಗೆ ತಣ್ಣೀರು ಎರಚಿದ್ದು, ಕೆಪಿಸಿಸಿ ಅಧ್ಯಕ್ಷರಾಗುವ ಅವಕಾಶವನ್ನು ತಪ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಒಂದೆರಡು ತಿಂಗಳಿಂದ ಬಹುತೇಕ ತಾವೇ ಅಧ್ಯಕ್ಷರು ಎಂದು ಓಡಾಡಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಕೂಡಾ ಇವರೇ ಕೆಪಿಸಿಸಿ ಅಧ್ಯಕ್ಷರು ಎಂದು ಬಿಂಬಿಸಿಕೊಂಡಿದ್ದ ಡಿಕೆಶಿಗೆ ಅವಕಾಶ ತಪ್ಪಿಸುವಲ್ಲಿ ರಾಜ್ಯ ನಾಯಕರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ದಿಲ್ಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ರಾಜ್ಯ ಕಾಂಗ್ರೆಸ್ ನಾಯಕರಾದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ನಾಯಕರು ಶಿವಕುಮಾರ್ಗೆ ಪೂರಕವಾಗದ ಮಾಹಿತಿಯನ್ನು ಒದಗಿಸಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಸುಗಮವಾಗಿದ್ದ ಅಧ್ಯಕ್ಷಗಾದಿ ಕೈತಪ್ಪುತ್ತಿದೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷಗಾದಿಗೆ ಸಿದ್ದರಾಮಯ್ಯ ಆಪ್ತರು ಹಾಗೂ ಡಿಕೆ ಶಿವಕುಮಾರ್ ನಡುವೆ ಸಾಕಷ್ಟು ಸ್ಪರ್ಧೆ ಏರ್ಪಟ್ಟಿತ್ತು. ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಂಸದ ಕೆಎಚ್ ಮುನಿಯಪ್ಪ ಹಾಗೂ ರಾಜ್ಯಸಭೆ ಸದಸ್ಯ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ನಾಯಕರ ಬೆಂಬಲ ಇದ್ದಾಗ್ಯೂ ಶಿವಕುಮಾರ್ಗೆ ಅವಕಾಶ ತಪ್ಪಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಪ್ರಬಲವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮವರ ಆಯ್ಕೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಬೀರುವ ಯತ್ನ ನಡೆಸಿದ್ದರು. ಇತ್ತೀಚೆಗೆ ಮಾಜಿ ಸಂಸದ ಮಲ್ಲಿಕಾರ್ಜುನ್ ಖರ್ಗೆ ಜೊತೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದ್ದರು. ಇದೀಗ ಎಲ್ಲರ ಮಾಹಿತಿ ಕಲೆ ಹಾಕಿರುವ ಕಾಂಗ್ರೆಸ್ ಹೈಕಮಾಂಡ್ ಶಿವಕುಮಾರ್ಗೆ ರಾಜ್ಯ ಕಾಂಗ್ರೆಸ್ನ ಉನ್ನತ ಹುದ್ದೆಯಾದ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಿರಲು ತೀರ್ಮಾನಿಸಿದೆ ಎಂಬ ಮಾಹಿತಿ ಲಭಿಸಿದೆ.
ಕಳಂಕ ಕಾರಣ ಅಕ್ರಮ ಆಸ್ತಿ ಸಂಪಾದನೆ ವಿಚಾರವಾಗಿ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಯಾವುದೇ ಸಂದರ್ಭದಲ್ಲಿಯೂ ವಿಚಾರಣೆಗೆ ಒಳಪಡುವ ಸಾಧ್ಯತೆ ಇದೆ. ಅಧ್ಯಕ್ಷಗಾದಿಗೆ ಏರುತ್ತಿದ್ದಂತೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದರೆ ಇದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಮುಜುಗರ ಉಂಟಾಗಲಿದೆ. ಆಡಳಿತ ಪಕ್ಷವಾದ ಬಿಜೆಪಿಗೆ ತಮ್ಮ ಬಗ್ಗೆ ಆಡಿಕೊಳ್ಳಲು ತಾವೇ ಅವಕಾಶ ಮಾಡಿಕೊಟ್ಟಂತೆ ಆಗಲಿದೆ. ಇದರಿಂದ ಡಿಕೆಶಿ ಕಳಂಕ ಮುಕ್ತರಾಗಿ ಬಂದ ನಂತರವೇ ಅವರಿಗೆ ಸೂಕ್ತವಾದ ಜವಾಬ್ದಾರಿಯುತ ಸ್ಥಾನವನ್ನು ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಇದನ್ನೇ ಶಿವಕುಮಾರ್ಗೂ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರಿಗೂ ಮನವರಿಕೆ ಮಾಡಿಕೊಟ್ಟಿದೆ ಎಂಬ ಮಾಹಿತಿ ಇದೆ.