ಬೆಂಗಳೂರು :ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಬೇಕಿದ್ದು, ಕಚೇರಿಗಳ ಮೇಲೆ ದಾಳಿ ನಡೆಸಿ ಹಾಕಲಾಗಿರುವ ಬೀಗ ಮುದ್ರೆ ತೆರವುಗೊಳಿಸಲು ಆದೇಶ ನೀಡಬೇಕೆಂದು ಕೋರಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಹೈಕೋರ್ಟ್ ಮೊರೆ ಹೋಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತವು ಎಸ್‍ಡಿಪಿಐಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ 17 ಕಚೇರಿಗಳಿಗೆ ಬೀಗ ಹಾಕಿದೆ. ಇದನ್ನು ತೆರವುಗೊಳಿಸಲು ನಿರ್ದೇಶನ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಹೈಕೋರ್ಟ್ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಅರ್ಜಿಯ ವಿಚಾರಣೆ ನಡೆಸಿ ಎಸ್‌ಡಿಪಿಐ ಕಚೇರಿಗಳ ಮೇಲೆ ನಡೆಸಲಾದ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದ ದಾಖಲೆಗಳನ್ನು ಹೈಕೋರ್ಟ್ಗೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಎಸ್‌ಡಿಪಿಐ ಪರವಾಗಿ ವಾದ ಮಂಡಿಸಿದ ವಕೀಲರು, ದಕ್ಷಿಣ ಕನ್ನಡದ ಜಿಲ್ಲಾ ಆಡಳಿತವು ಎಸ್‍ಡಿಪಿಐಗೆ ಸೇರಿದ ಕಚೇರಿಗಳಿಗೆ ಅನಗತ್ಯವಾಗಿ ಬೀಗ ಹಾಕಿದೆ. ಕಚೇರಿಗಳನ್ನು ಬಂದ್ ಮಾಡಿದ್ದರಿಂದ ಯಾವುದೇ ರಾಜಕೀಯ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಕಚೇರಿಯ ಬಾಗಿಲುಗಳನ್ನು ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಸರ್ಕಾರದ ಪರ ವಕೀಲರಿಂದ ತೀವ್ರ ಆಕ್ಷೇಪ:ವಿಚಾರಣೆ ವೇಳೆ ಎಸ್‌ಡಿಪಿಐನ ಅರ್ಜಿಗೆ ರಾಜ್ಯ ಸರ್ಕಾರದ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಸಮಾಜ ವಿರೋಧಿ ಕೃತ್ಯಗಳ ಆರೋಪದ ಹಿನ್ನೆಲೆಯಲ್ಲಿ ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆಯನ್ನು ನಿಷೇಧಿಸಿದೆ. ಎಸ್ಡಿಪಿಐ ಕಚೇರಿಗಳ ಮೇಲಿನ ದಾಳಿ ಸಂದರ್ಭ ಸ್ಥಳದಲ್ಲಿ ಪಿಎಫ್ಐಗೆ ಸಂಬಂಧಿಸಿದ ಸಾಮಗ್ರಿಗಳು, ಇತರ ಸೂಕ್ತ ಮಾಹಿತಿಗಳು ದೊರೆತಿವೆ. ಹಾಗಾಗಿ ಕಚೇರಿಗೆ ಬೀಗ ಹಾಕಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.