ಬೆಂಗಳೂರು:ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ವಿಕಾಸ ಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಿಎಫ್ಐ ಸಂಘಟನೆಯವರಿಂದ ರುದ್ರೇಶ್ ಕೊಲೆ ನಂತರ ಆರ್ಎಸ್ಎಸ್ ಕಾರ್ಯಕರ್ತರ ಕೊಲೆ ಮಾಡಿದ್ದಾರೆ. ನಿನ್ನೆ ಆ ಸಂಘಟನೆಯವರನ್ನು ಬಂಧಿಸಲಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.
ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆನ್ನು ನಿಷೇಧಿಸಬೇಕು: ಸಚಿವ ಶ್ರೀರಾಮಲು ಈ ಹಿಂದೆ ನಾನು ಸಂಸದನಾಗಿದ್ದ ಸಂದರ್ಭದಲ್ಲಿ ಅಂದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಮನವಿ ಮಾಡಲಾಗಿತ್ತು. ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಈಗಲೂ ಸಹ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಿಯೋಗ ತೆರಳಿ ಆ ಎರಡೂ ಸಂಘಟನೆಗಳನ್ನು ನಿಷೇಧ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.
ಜಮೀರ್ ಅಹ್ಮದ್ಗೆ ಟಾಂಗ್ : ಜಮೀರ್ ಅಹ್ಮದ್ ನನ್ನ ದೋಸ್ತ್. ಆತ ಮೊದಲಿನಿಂದಲೂ ಹೇಳಿದ್ದು ಯಾವುದೂ ಮಾಡಲಿಲ್ಲ. ಯಡಿಯೂರಪ್ಪ ಸಿಎಂ ಆದರೆ ಅವರ ಮನೆಯ ಸೆಕ್ಯೂರಿಟಿ ಕೆಲಸ ಮಾಡುತ್ತೇನೆ ಎಂದಿದ್ದರು. ವಿಧಾನಸೌಧಕ್ಕೆ ಬೆಂಕಿ ಇಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಆದರೆ, ಅವರು ಆಡಿದ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಶ್ರೀರಾಮುಲು ಟಾಂಗ್ ನೀಡಿದರು. ಯಾರೇ ಆಗಲಿ ಜಾತಿ, ಧರ್ಮವನ್ನು ಇಂಥ ವಿಚಾರಕ್ಕೆ ತರಬಾರದು. ಕೋಮು ಪ್ರಚೋದನೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಜಮೀರ್ ಅಹಮದ್ ಅವರಿಗೆ ಪ್ರತಿಭಟನೆ ಮಾಡಲು ಅವಕಾಶ ಕೊಡಲಿಲ್ಲ ಎಂದು ಸ್ಪಷ್ಟನೆ ನೀಡಿದರು.