ಬೆಂಗಳೂರು:ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆಯ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅನುದಾನವನ್ನು ಬೇರೆಡೆ ಬಳಸಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.
ಬೇರೆ ಯಾವುದೇ ಕಡೆ ಅನುದಾನವನ್ನು ಬಳಕೆ ಮಾಡಿಲ್ಲ. ಈ ಯೋಜನೆಯ ಅನುದಾನವನ್ನು ಸಮುದಾಯದ ಏಳಿಗೆಗೋಸ್ಕರ ಮಾತ್ರ ಸದ್ಬಳಕೆ ಮಾಡಿದ್ದೇವೆ. ಈ ಬಗ್ಗೆ ಯಾವುದೇ ತಪ್ಪು ಕಲ್ಪಬೆ ಬೇಡ ಎಂದು ಸ್ಪಷ್ಟಪಡಿಸಿದರು.
2020-21 ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ 18,131.12 ಕೋಟಿ ರೂ. ಒದಗಿಸಿದ್ದು, 17,352.45 ಕೋಟಿ ರೂ. ವೆಚ್ಚವಾಗಿದೆ. ಒಟ್ಟು 96% ಪ್ರಗತಿ ಸಾಧಿಸಲಾಗಿದೆ. ಇತ್ತ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 7814.78 ಕೋಟಿ ಒದಗಿಸಿದ್ದು, 7294.54 ಕೋಟಿ ರೂ. ವೆಚ್ಚವಾಗಿದೆ. ಒಟ್ಟು 93% ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.
36 ಅಭಿವೃದ್ಧಿ ಇಲಾಖೆಗಳಿಂದ ವಿವಿಧ ಕಾರ್ಯಕ್ರಮಗಳಿಗೆ ಎಸ್ಸಿಎಸ್ಪಿ/ಟಿಎಸ್ಪಿ ಅಡಿಯಲ್ಲಿ ಒಟ್ಟು 25,945.90 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ 24,646.99 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಆ ಮೂಲಕ 95% ಪ್ರಗತಿ ಸಾಧಿಸಲಾಗಿದೆ ಎಂದರು.