ಕರ್ನಾಟಕ

karnataka

ETV Bharat / state

ಗ್ಯಾರಂಟಿಗಳಿಗಾಗಿ ಅನುದಾನ ನೀಡುವ ಮೂಲಕ ಎಸ್​ಸಿಎಸ್​ಪಿ ಟಿಎಸ್​ಪಿ ಕಾಯ್ದೆ ನಿಯಮ ಮೀರಿಲ್ಲ: ಸಚಿವ ಹೆಚ್.ಸಿ ಮಹದೇವಪ್ಪ - ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸಿದ್ದ ಹಣ

ಕಾಂಗ್ರೆಸ್​ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಾಗಿ ಎಸ್​ಸಿಎಸ್​ಪಿ ಮತ್ತು ಟಿಎಸ್​ಪಿ ಕಾಯ್ದೆಯಡಿ ಭಾಗಶಃ ಅನುದಾನ ಹಂಚಿಕೆ ಮಾಡಿಲಾಗಿದ್ದು, ಇಲ್ಲಿ ಎಲ್ಲಿಯೂ ನಿಯಮಾವಳಿಗಳನ್ನು ಮೀರಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.

scsp-and-tsp-act-does-not-violate-while-providing-grants-for-guarantees-minister-hc-mahadevappa
ಗ್ಯಾರಂಟಿಗಳಿಗಾಗಿ ಅನುದಾನ ನೀಡುವ ಮೂಲಕ ಎಸ್​ಸಿಎಸ್​ಪಿ ಟಿಎಸ್​ಪಿ ಕಾಯ್ದೆ ನಿಯಮ ಮೀರಿಲ್ಲ: ಸಚಿವ ಹೆಚ್.ಸಿ ಮಹಾದೇವಪ್ಪ

By

Published : Aug 3, 2023, 8:43 PM IST

ಬೆಂಗಳೂರು: ಗ್ಯಾರಂಟಿ ಯೋಜನೆಗಾಗಿ ಎಸ್​ಸಿಎಸ್​ಪಿ ಮತ್ತು ಟಿಎಸ್​ಪಿ ಕಾಯ್ದೆಯಡಿ ಭಾಗಶಃ ಅನುದಾನವನ್ನು ನೀಡಲಾಗಿದ್ದು, ಇಲ್ಲಿ ಎಲ್ಲಿಯೂ ನಿಯಮಾವಳಿಗಳನ್ನು ಮೀರಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸಿದ್ದ ಹಣವನ್ನು ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಬೇರೆ ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿತ್ತು. ಇಂತಹ ಪಕ್ಷದ ನಾಯಕರು ಈ ದಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನಮ್ಮ ಸರ್ಕಾರದ ಬಗ್ಗೆ ಟೀಕಿಸುತ್ತಿರುವುದು ವಿಪರ್ಯಾಸವಾಗಿದೆ. ನೈತಿಕತೆ ಇಲ್ಲದೇ ಮಾತನಾಡುತ್ತಿರುವ ಇವರ ಮಾತುಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಎಸ್​ಸಿಎಸ್​ಪಿ/ ಟಿಎಸ್​ಪಿ ಅಧಿನಿಯಮ 2013ರ ಅನ್ವಯ ಪ.ಜಾತಿ/ಪ.ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲು ಅವಕಾಶವಿದೆ. ಈ ನಿಯಮದ ಅಡಿಯಲ್ಲಿ ಅನುಸೂಚಿತ ಜಾತಿ ಉಪಯೋಜನೆಗಳು ಹಾಗೂ ಬುಡಕಟ್ಟು ಉಪಯೋಜನೆಗಳ ಅಡಿಯಲ್ಲಿ ಇತರೆ ಸಮುದಾಯಗಳೊಂದಿಗೆ ಪ.ಜಾತಿ/ ಪ.ಪಂಗಡದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಪ್ರಯೋಜನ ಒದಗಿಸುವ ವಲಯಗಳಿಗೆ ನೀಡಬಹುದು. ಇದು ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮುಂತಾದ ಸಾಮಾನ್ಯ ಸಾಮಾಜಿಕ ವಲಯದ ಯೋಜನೆಗಳನ್ನು ಎಸ್​ಸಿಎಸ್​​ಪಿ/ಟಿಎಸ್​ಪಿ ಕಾಯ್ದೆಯಡಿ ಸೇರಿಸಲು ಅವಕಾಶವಿರುತ್ತದೆ ಎಂದಿದ್ದಾರೆ.

ವಿವಿಧ ಇಲಾಖೆಗಳಿಗೆ ಅನುದಾನ :ಕಳೆದ 10 ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳಿಗೆ ಎಸ್​​ಸಿಎಸ್​ಪಿ/ ಟಿಎಸ್​ಪಿ ಅನುದಾನವನ್ನು ಹಂಚಿಕೆ ಮಾಡಲಾಗಿರುತ್ತದೆ. ಈಗಲೂ ಸಹ ಇದೇ ಆಧಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕಾಯ್ದೆಯಡಿ ಭಾಗಶಃ ಅನುದಾನವನ್ನು ನೀಡಲಾಗುತ್ತಿದೆ. ಇಲ್ಲಿ ಎಲ್ಲಿಯೂ ಕಾಯ್ದೆಯ ನಿಯಮಾವಳಿಗಳನ್ನು ಮೀರಿಲ್ಲ ಮತ್ತು ಅದರ ಆಶಯಗಳಿಗೆ ಧಕ್ಕೆ ಆಗುವಂತೆ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್​ಸಿ ಎಸ್​​ಪಿ / ಟಿಎಸ್​ಪಿ ಕಾಯ್ದೆಯಡಿಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟಾರೆ 34,294 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಅನುದಾನದ ಪ್ರಮಾಣವು 13% ಅಂದರೆ ಸುಮಾರು 4,031 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ನಮ್ಮ ಸರ್ಕಾರ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ದಿಗೆ ಬದ್ದವಾಗಿದೆ. ಇದಕ್ಕೆ ಪೂರಕವಾಗಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆ 2013ರ ಸೆಕ್ಷನ್ 7(ಡಿ)ಯನ್ನು ಕೈಬಿಡಬೇಕೆಂಬ ಸಮುದಾಯಗಳ ಬೇಡಿಕೆಗೆ ಸ್ಪಂದಿಸಿ 7(ಡಿ) ಅನ್ನು ರದ್ದುಪಡಿಸುವ ಕೆಲಸವನ್ನು ಮಾಡಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯ ಆಯವ್ಯಯದಲ್ಲಿ 7(ಡಿ) ಅನ್ನು ರದ್ದು ಮಾಡಿದ ನಂತರದಲ್ಲಿ 2022-23 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿ ವಿವಿಧ ಇಲಾಖೆಗಳಿಗೆ ಡೀಮ್ಡ್ ವೆಚ್ಚ ಸೇರಿ ಹಂಚಿಕೆ ಮಾಡಲಾಗಿದ್ದ 7,450.80 ಕೋಟಿಗಳ ಹಣವು 2023-24ನೇ ಸಾಲಿನಲ್ಲಿ ಸುಮಾರು 2,787.33 ಕೋಟಿಗಳಿಗೆ ಇಳಿಕೆಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಡೀಮ್ಡ್ ಹಂಚಿಕೆಯನ್ನು ರದ್ದುಪಡಿಸಿರುವ ಕಾರಣ ಸರ್ಕಾರದ ವಿವಿಧ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಕಡಿತಗೊಳಿಸಿ, ಅದನ್ನು ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಏಳಿಗೆಗಾಗಿ ನಮ್ಮ ಸರ್ಕಾರವು ಈ ಹಿಂದೆ ನುಡಿದಂತೆಯೇ ನಡೆದುಕೊಂಡಿದೆ. ಶೋಷಿತ ಸಮುದಾಯಗಳ ಮೇಲೆ ನಮಗಿರುವುದು ಕರುಣೆ ಮಾತ್ರವಲ್ಲ ಜವಾಬ್ದಾರಿ ಎಂಬ ಸಂದೇಶವನ್ನೂ ನೀಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟೀಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details