ಬೆಂಗಳೂರು :ಸಣ್ಣ ನೀರಾವರಿ ಇಲಾಖೆಯ ಯೋಜನೆಗಳಡಿ 2018ರಲ್ಲಿ ಬಾಕಿ ಬಿಲ್ 440 ಕೋಟಿ ರೂ. ನಷ್ಟಿತ್ತು. ಸೆಪ್ಟೆಂಬರ್ ಅಂತ್ಯದ ವೇಳೆಗೆ ಇದು 3,036 ಕೋಟಿ ರೂ. ಗಳಷ್ಟಾಗಿದೆ. ಕಳೆದ ಎರಡು ವರ್ಷದಲ್ಲಿ ನಿಗದಿತ ಆಯವ್ಯಯದ ಮೂರು ಪಟ್ಟು ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು ಬಾಕಿ ಬಿಲ್ ಮೊತ್ತ ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಪ್ರಾರಂಭವಾಗದ ಹಾಗೂ ಹೊಸ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, 2023ರ ಏಪ್ರಿಲ್ 1ರ ವೇಳೆಗೆ ಇಲಾಖೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾದ ಮೊತ್ತ- 22,304 ಕೋಟಿ ರೂ. ಇದ್ದು, ಅದರಲ್ಲಿ 31-3-2023ರ ವರೆಗೆ 9,602.37 ಕೋಟಿ ರೂ. ವೆಚ್ಚವಾಗಿದೆ. 2023-24ನೇ ಸಾಲಿಗೆ ಬಾಕಿ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾದ ಮೊತ್ತ 12,696.35 ಕೋಟಿ ರೂ. ಆಗಿದೆ. ಇಲಾಖೆಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ನಿರ್ವಹಿಸಲು ಬೇಕಾಗುವ ಬಾಕಿ ಮೊತ್ತ 11,904 ಕೋಟಿ ರೂ. ನಷ್ಟಿದೆ. ಕಾಮಗಾರಿ ಪ್ರಾರಂಭವಾಗಿದ್ದರೆ ಅಂತಹ ಯೋಜನೆಗಳನ್ನು ಮುಂದುವರೆಸಿ. ಪ್ರಾರಂಭವಾಗದ ಕಾಮಗಾರಿಗಳನ್ನು ಕೈಬಿಡಲು ಸೂಚಿಸಿದರು.
ರಾಜ್ಯದಲ್ಲಿ ವಿವಿಧ ಇಲಾಖೆಗಳಡಿ ಇರುವ 34 ಸಾವಿರಕ್ಕೂ ಹೆಚ್ಚು ಕೆರೆಗಳ ಸಮಗ್ರ ನಿರ್ವಹಣೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಡಿ ಕೆರೆ ಬಳಕೆದಾರರ ಸಂಘಗಳನ್ನು ಬಲಿಷ್ಠಗೊಳಿಸುವ ಕುರಿತು ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಹಣಕಾಸು ಇಲಾಖೆಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಧಿಕಾರೇತರ ಸದಸ್ಯರ ನೇಮಕ ಮಾಡುವ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆಯ ಪರಿಣತರು ಹಾಗೂ ಕಾಳಜಿ ಉಳ್ಳವರನ್ನು ಆಯ್ಕೆ ಮಾಡಲು ಸೂಚಿಸಿದರು. ಸಣ್ಣ ನೀರಾವರಿ ಇಲಾಖೆ ಹಾಗೂ ಬಾರಿ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಮೀನುಗಾರಿಕೆ ಗುತ್ತಿಗೆ ನೀಡುವ ಮೂಲಕ ಸಂಪನ್ಮೂಲ ಕ್ರೋಢೀಕರಿಸುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.