ಬೆಂಗಳೂರು:ಪ್ರವಾಹ ಪರಿಹಾರ ಕಾರ್ಯಕ್ಕಾಗಿ ಎಸ್ ಸಿಎಸ್ ಪಿ ಟಿಎಸ್ ಪಿ ಯೋಜನೆ ಅನುದಾನ ಬಳಸುವ ಸರ್ಕಾರದ ನಿರ್ಧಾರ ಬಹಳಷ್ಟು ಟೀಕೆ, ವಿರೋಧಗಳಿಗೆ ಕಾರಣವಾಗಿದೆ. ಅಷ್ಟಕ್ಕೂ ಎಸ್‌ಸಿಎಸ್ ಪಿ ಟಿಎಸ್ ಪಿ ಯೋಜನೆಯಲ್ಲಿ ಖರ್ಚಾಗದೆ ಉಳಿದಿರುವ ಹಣ, ಇಲಾಖಾವಾರು ಅನುದಾನ ಬಳಕೆಯ ವಾಸ್ತವ ವರದಿ ಇಲ್ಲಿದೆ.
ಈ ಬಾರಿ ರಾಜ್ಯ ಹಿಂದೆಂದೂ ಕಂಡರಿಯದಷ್ಟು ಅತಿವೃಷ್ಠಿಗೆ ಸಾಕ್ಷಿಯಾಗಿದೆ. ದೊಡ್ಡ ಪ್ರಮಾಣದ ನೆರೆ ಹಾನಿಯಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ಹೊರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಧ್ಯ ಎಲ್ಲ ಮೂಲಗಳಿಂದ ಹಣ ಕ್ರೋಢೀಕರಣಕ್ಕೆ ಕೈ ಹಾಕಿದೆ. ಹೀಗಾಗಿನೇ ಸಿಎಂ ಪರಿಶಿಷ್ಟ ಜಾತಿ ಉಪಯೋಜನೆ ಹಾಗು ಗಿರಿಜನ ಉಪಯೋಜನೆ (scsp tsp)ಯಡಿ ಖರ್ಚಾಗದೇ ಉಳಿದಿರುವ ಸುಮಾರು 1150 ಕೋಟಿ ರೂ. ಅನುದಾನವನ್ನು ದಲಿತ ಕಾಲೋನಿಯಲ್ಲಿನ ರಸ್ತೆ, ಮನೆ ನಿರ್ಮಾಣ ಕಾಮಗಾರಿಗಳಿಗೆ ಬಳಸಲು ನಿರ್ಧರಿಸಿದೆ.
ನಿಯಮದ ಪ್ರಕಾರ ಪರಿಶಿಷ್ಟ ಜಾತಿ ಉಪಯೋಜನೆ ಹಾಗು ಗಿರಿಜನ ಉಪಯೋಜನೆಯಡಿಯ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಹೀಗಾಗಿ ಸರ್ಕಾರದ ಈ ನಿರ್ಧಾರ ದಲಿತ ಸಂಘಟನೆ ಹಾಗು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಎಸ್ಸಿಎಸ್ ಪಿ ಟಿಎಸ್ ಪಿ ವಾರ್ಷಿಕ ಉಳಿಕೆ ಹಣ:
2016-17ರಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ(scsp) ಯಡಿ ಒಟ್ಟು 14,408.10 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಎಲ್ಲ 33 ವಿವಿಧ ಇಲಾಖೆಗಳಿಗೆ 13,965.25 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ವಿವಿಧ ಇಲಾಖೆಗಳು ಒಟ್ಟು 13,315.15 ಕೋಟಿ ರೂ. ಖರ್ಚು ಮಾಡಿವೆ. ಒಟ್ಟು ಖರ್ಚಾಗದೇ ಉಳಿದ ಹಣ 649.85 ಕೋಟಿ ರೂ.
ಎಸ್ಸಿಎಸ್ ಪಿ ಯೋಜನೆ ಹಣದ ಮಾಹಿತಿ 2017-18ರಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ(scsp) ಯಡಿ ಒಟ್ಟು 19,647.58 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಈ ಪೈಕಿ 19,307.64 ಕೋಟಿ ರೂ.ಬಿಡುಗಡೆ ಮಾಡಲಾಗಿದ್ದು, 18,503.43 ಕೋಟಿ ರೂ. ಖರ್ಚು ಮಾಡಲಾಗಿದೆ. ಅಂದರೆ ಒಟ್ಟು 804.21 ಕೋಟಿ ರೂ. ಅನುದಾನ ಖರ್ಚಾಗದೆ ಉಳಿಕೆಯಾಗಿದೆ.
2019-20 ರ ಎಸ್ಸಿಪಿ ಯೋಜನೆ ಹಣದ ಮಾಹಿತಿ ಇನ್ನು ಗಿರಿಜನ ಉಪಯೋಜನೆ (tsp)ಯಡಿ 2016-17ರಲ್ಲಿ 33 ಇಲಾಖೆಗಳಿಗೆ ಒಟ್ಟು 5,632.19 ಕೋಟಿ ರೂ. ಹಣ ಹಂಚಿಕೆಯಾಗಿದೆ. ಈ ಪೈಕಿ 5,423.79 ಕೋಟಿ ರೂ. ಹಣ ಬಿಡುಗಡೆಯಾಗಿದ್ದರೆ, 5,150.10 ಕೋಟಿ ರೂ. ಅನುದಾನ ಖರ್ಚಾಗಿದೆ. ಅಂದರೆ ಒಟ್ಟು 273.69 ಕೋಟಿ ರೂ. ಹಣ ಖರ್ಚಾಗದೆ ಉಳಿಕೆಯಾಗಿದೆ.
2019-20 ನೇ ಟಿಎಸ್ಪಿ ಯೋಜನೆ ಹಣ ಅದೇ ರೀತಿ 2017-18ರಲ್ಲಿ ಗಿರಿಜನ ಉಪಯೋಜನೆ (tsp)ಯಡಿ ಒಟ್ಟು 8314.76 ಕೋಟಿ ರೂ. ಹಂಚಿಕೆಯಾಗಿದ್ದರೆ, ಅದರಲ್ಲಿ 8124.25 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ 7700.21 ಕೋಟಿ ರೂ. ಅನುದಾನ ಖರ್ಚಾಗಿದೆ. ಅಂದರೆ ಒಟ್ಟು 424.04 ಕೋಟಿ ರೂ. ಖರ್ಚಾಗದೆ ಉಳಿದುಕೊಂಡಿದೆ.
ಕೆಲ ಇಲಾಖೆಗಳಿಂದ ಪ್ರಗತಿ ಶೂನ್ಯ:
2019-20ರ ಜುಲೈ ವರೆಗಿನ ಅನುದಾನ ಬಳಕೆ ಪ್ರಗತಿ ನೋಡಿದರೆ ಕೆಲ ಇಲಾಖೆಗಳು ಶೂನ್ಯ ಪ್ರಗತಿ ಕಂಡಿದೆ. ಪ್ರಮುಖವಾಗಿ ವಾರ್ತಾ, ಆರ್ಥಿಕ, ಕಾನೂನು, ಬೃಹತ್ ಕೈಗಾರಿಕೆ ಹಾಗು ಕನ್ನಡ ಸಂಸ್ಕೃತಿ ಇಲಾಖೆಗಳು ಪರಿಶಿಷ್ಟ ಜಾತಿ ಉಪಯೋಜನೆ ಹಾಗು ಗಿರಿಜನ ಉಪಯೋಜನೆಯಡಿ ಶೂನ್ಯ ಪ್ರಗತಿ ಕಂಡಿದೆ. ಯೋಜನೆಯಡಿ ಅನುದಾನವನ್ನೇ ಬಳಸಿಲ್ಲ.
ಈ ಬಾರಿ ಇಲ್ಲಿವರೆಗೆ ಎಸ್ಎಸ್ಪಿ, ಟಿಎಸ್ಪಿ ಯೋಜನೆಯಡಿ ವಿವಿಧ ಇಲಾಖೆಗಳು ಸರಾಸರಿ 18% ಅನುದಾನವನ್ನಷ್ಟೇ ಬಳಸಿರುವ ಬಗ್ಗೆ ಸಿಎಂ ಯಡಿಯೂರಪ್ಪ ಇತ್ತೀಚೆಗೆ ನಡೆದ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಹೀಗಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ದಲಿತ ಕಾಲೋನಿಗಳಲ್ಲಿನ ಪರಿಹಾರ ಕಾರ್ಯಕ್ಕೆ ಖರ್ಚಾಗದ ಅನುದಾನವನ್ನು ಬಳಸಲು ಸರ್ಕಾರ ನಿರ್ಧರಿಸಿದೆ.