ಉತ್ತರ ಭಾರತದಲ್ಲಿ ಜನರು ಗರಿಷ್ಠ ತಾಪಮಾನದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರೆ, ದಕ್ಷಿಣ ಭಾಗದ ಕೆಲವೆಡೆ ಗಾಳಿ ಸಹಿತ ಮಳೆಯ ಅಬ್ಬರ ಶುರುವಾಗಿದೆ. ಶನಿವಾರ, ಭಾನುವಾರ ಸುರಿದ ಆಲಿಕಲ್ಲು, ಗಾಳಿಸಹಿತ ಜೋರು ಮಳೆಗೆ ಕರ್ನಾಟಕದ ಬೆಂಗಳೂರು ನಗರದ ಅನೇಕ ಭಾಗಗಳು ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತವಾಯಿತು. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ವರ್ಷಧಾರೆ ಉಂಟಾಗಿದ್ದು ಇನ್ನೂ ಎರಡು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ನೆತ್ತಿ ಸುಡುವ ಉಷ್ಣಾಂಶ: ಉತ್ತರ ಭಾರತದ ಮಂದಿ ಬಿಸಿಲ ಝಳಕ್ಕೆ ನಲುಗುತ್ತಿದ್ದು ತಾಪಮಾನ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಹವಾಮಾನ ಇಲಾಖೆ ಪ್ರಕಾರ, ನೈಋತ್ಯ ದೆಹಲಿಯ ನಜಾಫ್‌ಗಢದಲ್ಲಿ ಭಾನುವಾರ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಈ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಎಂದು ಇಲಾಖೆ ತಿಳಿಸಿದೆ. ರಾಷ್ಟ್ರ ರಾಜಧಾನಿಯ ಇತರ ಭಾಗಗಳೂ ಸಹ ಅತಿ ಹೆಚ್ಚು ತಾಪಮಾನಕ್ಕೆ ಒಳಗಾಗಿವೆ. ನರೇಲಾ ಮತ್ತು ಪಿತಾಂಪುರದಲ್ಲಿ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅಯನಗರದಲ್ಲಿ 44 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದೆಹಲಿಯ ಪಾಲಂ 43.8 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಇಲಾಖೆಯ ದೆಹಲಿ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಮಾಹಿತಿ ನೀಡಿ, ಮೇ ತಿಂಗಳ ಮೊದಲಾರ್ಧದಲ್ಲಿ ಹೀಟ್‌ವೇವ್ ಪರಿಸ್ಥಿತಿಗಳು ವಾಯುವ್ಯ ಭಾರತದ ಭಾಗಗಳ ಮೇಲೆ ಪರಿಣಾಮ ಬೀರುತ್ತಿದ್ದು ಪಾಶ್ಚಿಮಾತ್ಯ ಅಡಚಣೆಗಳಿಂದಾಗಿ ಕಡಿಮೆ ತೀವ್ರತೆ ಉಂಟು ಮಾಡಿತ್ತು. ಆದರೆ ಮುಂದಿನ ಪಾಶ್ಚಿಮಾತ್ಯ ಅಡಚಣೆಯು ವಾಯುವ್ಯ ಭಾರತವನ್ನು ಸಮೀಪಿಸುತ್ತಿದ್ದು 7 ದಿನಗಳವರೆಗೆ ತಾಪಮಾನ ಹೆಚ್ಚಿರಲಿದೆ.