ಬೆಂಗಳೂರು: ಮಕ್ಕಳು ದೇಶದ ಭವಿಷ್ಯ. ನಿಮಗಾಗಿಯೇ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದು ಎಂದು ಭಾರತ ರತ್ನ ಸಿ.ಎನ್.ಆರ್.ರಾವ್ ವಿದ್ಯಾರ್ಥಿಗಳನ್ನ ಹುರಿದುಂಬಿಸಿದರು. 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶದ ಎರಡನೇ ದಿನ ರಾಷ್ಟ್ರೀಯ ಕಿಶೋರ್ ವೈಜ್ಞಾನಿಕ ಸಮ್ಮೇಳನ ನಡೆಯಿತು. ಮಕ್ಕಳ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮವನ್ನು ಭಾರತ ರತ್ನ ವಿಜ್ಞಾನಿ ಸಿ.ಎನ್.ಆರ್.ರಾವ್ ಉದ್ಘಾಟನೆ ಮಾಡಿದರು. ಇವರಿಗೆ ರಾಜೇಂದ್ರ ಪ್ರಸಾದ್, ಅಖಿಲೇಶ್ ಗುಪ್ತಾ ಸೇರಿದಂತೆ ಇತರರು ಸಾಥ್ ನೀಡಿದರು.
ಉದ್ಘಾಟನೆ ಬಳಿಕ ಮಾತಾನಾಡಿದ ಸಿ.ಎನ್.ಆರ್.ರಾವ್, ವಿಜ್ಞಾನದಲ್ಲಿ ಆವಿಷ್ಕಾರಕ್ಕೆ ಕೊನೆಯೇ ಇಲ್ಲ. ಎಷ್ಟು ಆವಿಷ್ಕಾರಗಳನ್ನ ಮಾಡುತ್ತಾ ಹೋದರು ಮಾಡುತ್ತಲೇ ಇರಬಹುದು. ನಾನೊಬ್ಬ ವಿಜ್ಞಾನಿ ಆಗಿರುವುದು ನಿಜಕ್ಕೂ ಖುಷಿ ನೀಡುತ್ತೆ. ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ ಎಂಬ ಮಹಾಶಕ್ತಿ ಒಟ್ಟಿಗೆ ಇರಬೇಕು. ಗ್ರಾಮೀಣ ಭಾಗದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತವೆ. ಅದನ್ನು ಹೊರತರುವ ಕೆಲಸ ಆಗಬೇಕು. ಇದರಿಂದ ನಮ್ಮ ದೇಶಕ್ಕೆ ಸಾಕಷ್ಟು ಉಪಯೋಗ ಆಗುತ್ತೆ ಎಂದು ಹೇಳಿದರು.