ಬೆಂಗಳೂರು: ಪ್ರೊಫೆಸರ್ ಸಿ.ಎನ್.ಆರ್.ರಾವ್ ಅವರನ್ನು ಆಧುನಿಕ ವಿಶ್ವೇಶ್ವರಯ್ಯ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಣ್ಣಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ, ಡಾ. ರಾಜಾ ರಾಮಣ್ಣ, ಸರ್ ಸಿ.ವಿ. ರಾಮನ್, ಪ್ರೊ. ಸತೀಶ್ ಧವನ್ ಮತ್ತು ಡಾ. ಕಲ್ಪನಾ ಚಾವ್ಹಾ - 'ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ'ದಲ್ಲಿ ಪಾಲ್ಗೊಂಡು ಮಾತನಾಡಿ, ಸಿಎನ್ಆರ್ ರಾವ್ ಅವರ ಸಾಧನೆ ಅಪ್ರತಿಮವಾದದ್ದು ಎಂದರು.
ನೈಸರ್ಗಿಕವಾಗಿ ನಾವು ಹೊಂದಿರುವ ಸಂಪನ್ಮೂಲವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ವಾತಾವರಣ ಸಮತೋಲನವನ್ನು ಕಾಪಾಡುತ್ತವೆ. ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಎದುರಾಗುವ ದೊಡ್ಡ ಮಟ್ಟದ ಹಾನಿಯನ್ನು ತಡೆಯಲು ನಾವು ಪರಿಸರವನ್ನು ಉಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸಚಿವ ಡಾ ಅಶ್ವಥ್ ನಾರಾಯಣ ಮಾತನಾಡಿ, ವಿಜ್ಞಾನ-ತಂತ್ರಜ್ಞಾನ ಆಧಾರಿತವಾಗಿ ನಾವು ತುಂಬಾ ಯಶಸ್ಸು ಸಾಧಿಸಿದ್ದೇವೆ. ವಿಜ್ಞಾನದ ಸಂಶೋಧನೆ ಮೂಲಕವೇ ಎಲ್ಲವೂ ಆರಂಭವಾಗಬೇಕಿದೆ. ಈ ನಿಟ್ಟಿನಲ್ಲಿ ನಾವು ಮುಂದಡಿ ಇಡಬೇಕಿದೆ ಸರ್ಕಾರ ಈ ವಿಚಾರದಲ್ಲಿ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ ಎಂದರು.