ಬೆಂಗಳೂರು :ರಾಜ್ಯದ ಯಾವ ಯಾವ ಭಾಗಗಳಲ್ಲಿ ಅವೈಜ್ಞಾನಿವಕಾಗಿ ರಸ್ತೆ ಉಬ್ಬುಗಳನ್ನು ( ರೋಡ್ ಹಂಪ್ ) ಹಾಕಿದ್ದರೋ ಅದನ್ನು ತಕ್ಷಣವೇ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆ ಶಾಸಕ ಕುಮಾರ್ ಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆಗೆದು ಹಾಕಬೇಕೆಂದು ಅನೇಕ ಕಡೆ ಮನವಿ ಬಂದಿದೆ. ಹೀಗಾಗಿ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಒಂದು ವೇಳೆ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವಾಗ ಯಾರಾದರೂ ಅಡ್ಡಿಪಡಿಸಿದರೆ ಪೊಲೀಸರ ಸಹಕಾರ ಪಡೆಯಲು ಸಹ ಸೂಚನೆ ನೀಡಲಾಗಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಸರ್ಕಾರ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ ಅವರು ರಸ್ತೆಗಳನ್ನು ಇಂಡಿಯನ್ ಸ್ಟ್ಯಾಂಡರ್ಡ್ ಕಾಂಗ್ರೆಸ್ ರೀತಿಯಲ್ಲಿ ನಿರ್ಮಾಣ ಮಾಡಬೇಕೆಂದು ಸಲಹೆ ಮಾಡಿದರು. ನಾನು ಅವರ ಸಲಹೆಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಶಾಸಕರನ್ನು ಸಭೆಗೆ ಆಹ್ವಾನಿಸಿ ಮಾಹಿತಿ ಪಡೆಯುತ್ತೇನೆ ಅಧಿಕಾರಿಗಳಿಗೆ ಅನುಷ್ಠಾನ ಮಾಡಲು ಸೂಚನೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಹಾಗೂ ತಾಳಗೊಪ್ಪ ಹೋಬಳಿ ಸೇರಿದಂತೆ 53.60 ಕಿ.ಮೀ ಉದ್ದಕ್ಕೆ ಒಂದು ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಜೊತೆಗೆ 99.90 ಕಿ.ಮೀ ಉದ್ದದ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.