ಬೆಂಗಳೂರು: ಡಿಸೆಂಬರ್ ಅಂತ್ಯದವರೆಗೆ ಶಾಲೆಗಳನ್ನು ಪುನಾರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ವರ್ಷಾಂತ್ಯದವರೆಗೂ ಶಾಲೆಗಳ ಆರಂಭ ಇಲ್ಲ: ಸಿಎಂ ಸ್ಪಷ್ಟನೆ - ಡಿಸೆಂಬರ್ವರೆಗೆ ಶಾಲೆ ಆರಂಭ ಇಲ್ಲವೆಂದು ಸಿಎಂ ಯಡಿಯೂರಪ್ಪ ಸ್ಪಷ್ಟನೆ
13:02 November 23
ಡಿಸೆಂಬರ್ ಅಂತ್ಯದವರೆಗೆ ಶಾಲೆಗಳ ಆರಂಭ ಇಲ್ಲ. ನಂತರ ಮತ್ತೊಂದು ಸಭೆ ನಡೆಸಿದ ಬಳಿಕ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶಾಲೆಗಳ ಆರಂಭದ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು, ಡಿಸೆಂಬರ್ ಮೂರನೇ ವಾರ ಮತ್ತೊಂದು ಸಭೆ ನಡೆಸಲಾಗುತ್ತದೆ. ಈ ಬಗ್ಗೆ ಮತ್ತೊಮ್ಮೆ ತಜ್ಞರ ಜೊತೆ ಸಮಾಲೋಚನೆ ನಡೆಸುತ್ತೇವೆ ಎಂದು ತಿಳಿಸಿದರು.
ತಜ್ಞರ ಜೊತೆಗೆ ಸಭೆ ನಡೆಸಿದ ಬಳಿಕ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯಕ್ಕೆ ಶಾಲೆ ಆರಂಭಿಸದಿರುವ ಬಗ್ಗೆ ನಿರ್ಧರಿಸಿದ್ದೇವೆ ಎಂದರು.
ಸಭೆಯಲ್ಲಿ 8 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದ ಸಿಎಂ ಡಿಸೆಂಬರ್ ಅಂತ್ಯದ ವರೆಗೆ ಶಾಲೆ ಆರಂಭಿಸದಿರುವ ಬಗ್ಗೆ ನಿರ್ಧಾರ ಕೈಗೊಂಡರು.