ಬೆಂಗಳೂರು :ಇಷ್ಟು ದಿನ ಮಕ್ಕಳು ಬೇಸಿಗೆ ರಜೆಯ ಮಜಾ ಅನುಭವಿಸಿದ್ದು, ಆಟದಲ್ಲಿ ಮಗ್ನರಾಗಿದ್ದರು. ಇದೀಗ ಆಟ ಮುಗಿದಿದ್ದು, ಪಾಠದತ್ತ ಹೊರಳುವ ಸಮಯ ಬಂದಿದೆ. 2023-24ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದ್ದು, ಮೇ 29 ರಿಂದ ರಾಜ್ಯದಲ್ಲಿ ಎಲ್ಲಾ ಶಾಲೆಗಳು ಪುನಾರಂಭಗೊಳ್ಳಲಿವೆ. ಅಕ್ಟೋಬರ್ 8 ರಿಂದ ದಸರಾ ರಜೆ ಹಾಗು 2024ರ ಏಪ್ರಿಲ್ 11 ರಿಂದ ಬೇಸಿಗೆ ರಜೆ ನೀಡಲಾಗಿದೆ.
2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಶಾಲೆಗಳಿಗೆ ನೀಡಲಾಗಿದ್ದ ಬೇಸಿಗೆ ರಜೆ ಮೇ 28ಕ್ಕೆ ಕೊನೆಗೊಳ್ಳಲಿದ್ದು, ಮೇ 29 ರಿಂದ ರಾಜ್ಯಾದ್ಯಂತ ಎಲ್ಲಾ ಶಾಲೆಗಳು ಆರಂಭಗೊಳ್ಳಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾಹಿತಿ ನೀಡಿದೆ. 2023-24ರ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಪ್ರಸಕ್ತ ಸಾಲಿನ ಮೊದಲನೇ ಶೈಕ್ಷಣಿಕ ಅವಧಿಯು ಮೇ 29 ರಿಂದ ಆರಂಭವಾಗಲಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ನಿಗದಿ ಪಡಿಸಲಾಗಿದೆ.
ರಾಜ್ಯ ಪಠ್ಯಕ್ರಮದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2023-24ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯಾದ್ಯಂತ ಏಕರೂಪದ ಶಿಕ್ಷಣ ಯಶಸ್ವಿ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ವಾರ್ಷಿಕ/ಮಾಹೆವಾರು ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಪರೀಕ್ಷೆ ಮತ್ತು ಮೌಲ್ಯಾಂಕನ ವಿಶ್ಲೇಷಣೆ ಗುಣಮಟ್ಟದ ಶಿಕ್ಷಣಕ್ಕಾಗಿ ಹಾಗು ಫಲಿತಾಂಶಮುಖಿ ಚಟುವಟಿಕೆಗಳ ನಿರ್ವಹಣೆ, ವಿವಿಧ ಶಾಲಾ ಹಂತದ ಸಿಸಿ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.