ಬೆಂಗಳೂರು: ಆರೋಗ್ಯ ಇಲಾಖೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಡಿಸೆಂಬರ್ವರೆಗೆ ಶಾಲೆ ಪುನಾರಂಭಿಸಲು ನಿರ್ಧರಿಸಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಡಿಸೆಂಬರ್ನಲ್ಲಿ ಚಳಿಗಾಲ ಆರಂಭವಾಗುವುದರಿಂದ ಕೊರೊನಾ ಎರಡನೇ ಅಲೆ ಏಳುವ ಸಾಧ್ಯತೆ ಇದೆ. ಈ ಹಿನ್ನೆಲೆ ತಾಂತ್ರಿಕ ಸಲಹಾ ಸಮಿತಿ, ಶಾಲೆ ಆರಂಭ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆರೋಗ್ಯ ಇಲಾಖೆಯೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಡಿಸೆಂಬರ್ ಮೂರನೇ ವಾರ ಮತ್ತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳೋಣ ಎಂದು ಆರೋಗ್ಯ ಸಚಿವರು ಸಲಹೆ ನೀಡಿದ್ದಾರೆ. ಆರೋಗ್ಯ ಇಲಾಖೆಯ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು, ಸದ್ಯಕ್ಕೆ ಶಾಲೆ ಪುನಾರಂಭಿಸದಿರಲು ಸಿಎಂ ನಿರ್ಧರಿಸಿದ್ದಾರೆ. ಡಿಸೆಂಬರ್ನಲ್ಲಿ ಪ್ರಾಥಮಿಕ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನರಾರಂಭಿಸಲು ನಿರ್ಧರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಶಾಲೆ ಆರಂಭವಾಗದಿರುವ ಕಾರಣ ಬಾಲ ಕಾರ್ಮಿಕರು, ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗಿದೆ ಎಂಬ ಆತಂಕ ವ್ಯಕ್ತವಾಗಿದೆ. ಮಕ್ಕಳ ಯೋಗಕ್ಷೇಮ ಪ್ರಮುಖವಾಗಿದೆ. ಯಾವುದೇ ಒತ್ತಡವೂ ನಮ್ಮ ಮೇಲೆ ಇಲ್ಲ. ಡಿಸೆಂಬರ್ ಮೂರನೇ ವಾರ ಮತ್ತೆ ತಜ್ಞರ ಸಮಿತಿ ಸಭೆ ನಡೆಸಲಿದ್ದೇವೆ. ಅಲ್ಲಿಯವರೆಗೆ ದೂರದರ್ಶನ, ಯೂಟ್ಯೂಬ್ ಮೂಲಕ ತರಗತಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಎಂಟನೇ ತರಗತಿವರೆಗಿನ ಮಕ್ಕಳಿಗೆ ಈ ವರ್ಷ ಶಾಲೆ ಆರಂಭ ಮಾಡುವ ಬಗ್ಗೆ ತೀರ್ಮಾನವೇ ಮಾಡಿಲ್ಲ. ಹತ್ತನೇ ತರಗತಿ ಮಕ್ಕಳಿಗೆ ಶಾಲೆ ಬೇಕೊ ಬೇಡವೊ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಶಾಲೆ ಆರಂಭ ಮಾಡಲೇ ಬಾರದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಇನ್ನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಹತ್ತನೇ ತರಗತಿಯ ಮಕ್ಕಳು ಎಷ್ಟು ಮಂದಿ ಇದ್ದಾರೆ ಎನ್ನುವ ಮಾಹಿತಿ ಪಡೆಯಲಾಗಿದೆ. ಅವರಿಗೆಲ್ಲ ಪರ್ಯಾಯವಾಗಿ ಏನು ಕ್ರಮ ಕೈಗೊಳ್ಳಬಹುದು ಎನ್ನುವ ಬಗ್ಗೆ ಚರ್ಚೆ ಮಾಡಿದ್ದೇವೆ. ಆರೋಗ್ಯ ಇಲಾಖೆ ನೀಡಿರುವ ಸಂಪೂರ್ಣ ಮಾಹಿತಿ ಒಪ್ಪಿ, ನಾವು ಡಿಸೆಂಬರ್ ತನಕ ಶಾಲೆ ತೆರೆಯುವುದಿಲ್ಲ ಎಂದರು.
ಸಂವೇದಾ ಮೂಲಕ ಎಸ್ ಎಸ್ ಎಲ್ ಸಿ ಸಿಲೆಬಸ್ ಮುಕ್ತಾಯ ಆಗಲಿದೆ. ಒಂದನೇ ತರಗತಿಯಿಂದ ನಾಲ್ಕನೇ ವರ್ಗದ ತನಕ ಝೀರೊ ಇಯರ್ ಅಂತ ಮಾಡೋದಿಲ್ಲ. ಅವರಿಗೂ ಮಕ್ಕಳ ಪಾಠ ಮಾಡ್ತಾ ಇದ್ದೇವೆ. ಮಕ್ಕಳ ಹಿತ ಮತ್ತು ಯೋಗಕ್ಷೇಮದ ಹಿನ್ನಲೆಯಲ್ಲಿ ನಾವು ಕ್ರಮ ತೆಗೆದುಕೊಳ್ತೇವೆ. ಯಾರ ಒತ್ತಡಕ್ಕೂ ಶಾಲೆ ಆರಂಭ ಮಾಡುವ ಬಗ್ಗೆ ನಾವು ನಿರ್ಧಾರ ಮಾಡೋದಿಲ್ಲ. ವಿದ್ಯಾಗಮದ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು.