ಬೆಂಗಳೂರು:ಶಾಲೆಗಳ ಆರಂಭದ ವಿಷಯವನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾತ್ರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅದೇ ರೀತಿ ನನ್ನ ಹಾಗೂ ಸಚಿವ ಸುಧಾಕರ್ ನಡುವೆ ಯಾವುದೇ ರೀತಿಯ ಸಮನ್ವಯತೆ ಕೊರತೆಯಿಲ್ಲ. ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಮಾಧ್ಯಮಗಳಲ್ಲಿ ಸುಧಾಕರ್ ಮತ್ತು ನನ್ನ ನಡುವೆ ಸಮನ್ವಯತೆ ಇಲ್ಲ, ಜಂಗೀಕುಸ್ತಿ ನಡೆಯುತ್ತಿದೆ ಎನ್ನುವ ಪದ ಬಳಸಿದ್ದಾರೆ. ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ಸುರೇಶ್ ಕುಮಾರ್ ಹಠ ಸಾಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಇಷ್ಟವಿಲ್ಲದಿದ್ದರೂ ಹಠ ಹಿಡಿದು ಶಾಲೆಗಳ ಆರಂಭಕ್ಕೆ ಸುರೇಶ್ ಕುಮಾರ್ ಮುಂದಾಗಿದ್ದಾರೆ ಎಂದು ವರದಿ ಮಾಡಲಾಗಿದೆ. ಆದರೆ ಇದು ಯಾವ ಆಧಾರದಲ್ಲಿ ಈ ರೀತಿ ವರದಿ ಮಾಡುತ್ತಿದ್ದಾರೆ ಗೊತ್ತಿಲ್ಲ. ಇದೆಲ್ಲ ಸತ್ಯಕ್ಕೆ ದೂರವಾದ ವಿಚಾರ. ಶಾಲೆಗಳನ್ನು ಆರಂಭಿಸುವ ವಿಚಾರ ನಮ್ಮ ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಲ್ಲ. ಇದು ಮಕ್ಕಳ ದೃಷ್ಟಿಯಿಂದ ಹಾಗೂ ಮಕ್ಕಳ ಭವಿಷ್ಯದ ಬದ್ಧತೆಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿ ಹಂತದಲ್ಲಿಯೂ ನಮ್ಮ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆ ಹಾಗೂ ಆರೋಗ್ಯ ಸಚಿವ ಸುಧಾಕರ್ ಕೊಡುತ್ತಿರುವ ಮಾರ್ಗದರ್ಶಿ ಸೂತ್ರ ಮತ್ತು ಸಲಹೆ ಪಡೆದು ನಾವು ಹೆಜ್ಜೆ ಇಡುತ್ತಿದ್ದೇವೆ. ನಾವು ಯಾರೂ ಕೂಡ ವೈಯಕ್ತಿಕ ಪ್ರತಿಷ್ಠೆಗಾಗಿ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿಗಳ ಮನೆಗೆ ಸಚಿವರು ಬರುವುದಕ್ಕೆ ಒಂದು ಕಾರಣವನ್ನು ಹುಡುಕಿದರೆ ಸಚಿವ ಸಂಪುಟ ನಡೆಸುವುದು ಕಷ್ಟವಾಗಲಿದೆ ಎಂದರು.
ಆರೋಗ್ಯ ಮತ್ತು ಶಿಕ್ಷಣ ಎರಡೂ ಕೂಡ ಸಮಾಜಕ್ಕೆ ಮುಖ್ಯ. ಅದೇ ರೀತಿ ನಮ್ಮ ಎರಡೂ ಇಲಾಖೆ ಸಮನ್ವಯ ಕೂಡ ಅತ್ಯುತ್ತಮ ರೀತಿಯಲ್ಲಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ನಾನು ಹಠ ಹಿಡಿದು ಶಾಲೆಗಳ ಆರಂಭದ ವಿಚಾರದಲ್ಲಿ ಮುಂದೆ ಹೋಗುತ್ತಿದ್ದೇನೆ ಎಂದು ಭಾವಿಸಬಾರದು. ಇದರಿಂದ ನನಗೆ ಏನೂ ಆಗಬೇಕಿಲ್ಲ ಎಂದು ಮಾಧ್ಯಮಗಳ ವರದಿಗೆ ಅಸಮಧಾನ ವ್ಯಕ್ತಪಡಿಸಿದರು.