ಬೆಂಗಳೂರು:ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ತಮ್ಮ ವಿರೋಧವಿಲ್ಲ, ಆದರೆ ಮಹಿಳೆಯರಿಗೆ ಶಕ್ತಿ ತುಂಬುತ್ತೇವೆಂದು ಸರ್ಕಾರ ಅವರ ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಶಾಲಾ ಮಕ್ಕಳಿಗೆ ಶಕ್ತಿ ಯೋಜನೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಕಿಡಿಕಾರಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶಕ್ತಿ ಯೋಜನೆಯಿಂದ ಶಾಲಾ ಮಕ್ಕಳಿಗೆ ಸಂಕಷ್ಟ: ಶಾಲಾ ಮಕ್ಕಳು ಪ್ರಯಾಸದಿಂದ ಬಸ್ ಹತ್ತುತ್ತಿರುವ ವಿಡಿಯೋವೊಂದನ್ನು ಎಕ್ಸ್ ಖಾತೆ (ಹಿಂದಿನ ಟ್ವಿಟ್ಟರ್)ಗೆ ಟ್ಯಾಗ್ ಮಾಡಿರುವ ಕುಮಾರಸ್ವಾಮಿ ಅವರು, ಶಕ್ತಿ ಯೋಜನೆಯ ಅಡ್ಡ ಪರಿಣಾಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷವು ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಕುತ್ತು ತರುವಂತಿವೆ. ಶಕ್ತಿ ಯೋಜನೆಯಿಂದ ಶಾಲಾ ಮಕ್ಕಳಿಗೆ ಸಂಕಷ್ಟ ಎದುರಾಗಿದೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಸರ್ಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ ಎಂದು ಟೀಕಿಸಿದ್ದಾರೆ.
ಶಕ್ತಿ ಯೋಜನೆ ಪರಿಣಾಮ ನಿತ್ಯವೂ ಶಾಲೆಗೆ ಹೋಗಬೇಕಾಗಿರುವ ಮಕ್ಕಳಿಗೆ ಬಸ್ಸುಗಳಲ್ಲಿ ಪ್ರಯಾಣಕ್ಕೆ ಸ್ಥಳಾವಕಾಶ ಸಿಗುತ್ತಿಲ್ಲ. ಶಿಕ್ಷಕರು, ಕಾರ್ಮಿಕರಿಗೂ ಇದೇ ದುಸ್ಥಿತಿ. ಆಟೋ, ಲಗೇಜ್ ಆಟೋ, ಗೂಡ್ಸ್ ವಾಹನಗಳನ್ನು ಹತ್ತಿ ಅಪಾಯಕಾರಿ ರಸ್ತೆಗಳಲ್ಲಿ ಮಕ್ಕಳು ಶಾಲೆಗೆ ಹೋಗಬೇಕು, ಮನೆಗೆ ವಾಪಸ್ ಬರಬೇಕು ಎಂದು ಮಕ್ಕಳ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಬಸ್ಗಳ ಕೊರತೆ, ಇನ್ನೊಂದೆಡೆ ಮಹಿಳೆಯರು ಪ್ರವಾಸಿ ತಾಣಗಳಿಗೆ ಮುಗಿಬಿದ್ದ ಪರಿಣಾಮ ಮಕ್ಕಳು ರಾತ್ರಿಯಾದರೂ ಮನೆ ತಲುಪುತ್ತಿಲ್ಲ ಎನ್ನುವ ಪತ್ರಿಕಾ ವರದಿ ಆಘಾತಕಾರಿ ಮಾಹಿತಿ ಚೆಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿ, ಮಕ್ಕಳ ಪಾಡು ಕೇಳುವವರಿಲ್ಲವಾಗಿದೆ. ಪರೀಕ್ಷೆ ಸಮಯದಲ್ಲಿ ಅವರ ಸಂಕಷ್ಟ ಹೇಳತೀರದು ಎಂದು ಹೇಳಿದ್ದಾರೆ.
ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ: ಶಕ್ತಿ ಯೋಜನೆ ಬಗ್ಗೆ ನನ್ನ ತಕರಾರು ಇಲ್ಲ. ಆದರೆ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ತುರ್ತು ಕ್ರಮ ಕೈಗೊಂಡು, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನನ್ನ ಆಗ್ರಹವಾಗಿದೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
ಇದನ್ನೂಓದಿ:ಕ್ರಿಮಿನಲ್ ಪರವಾಗಿ ಆರ್ ಅಶೋಕ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ: ಶಾಸಕ ಪ್ರಸಾದ ಅಬ್ಬಯ್ಯ